ಐಸಿಸ್ ನಂಟಿನ ಶಂಕೆ: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಬಂಧನ
ಹೈದರಾಬಾದ್,ಜು.12: ಕುಖ್ಯಾತ ಭಯೋತ್ಪಾದಕ ಗುಂಪು ಐಸಿಸ್ ಜೊತೆ ನಂಟು ಹೊಂದಿದ್ದಾರೆಂಬ ಶಂಕೆಯಲ್ಲಿ ಹೈದರಾಬಾದ್‌ನ ಇನ್ನಿಬ್ಬರು ಯುವಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಮಂಗಳವಾರ ಬಂಧಿಸಿದೆ. ಇವರಿಬ್ಬರು ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಭೇದಿಸಲಾದ ಭಯೋತ್ಪಾದಕ ಜಾಲವೊಂದರ ಪ್ರಮುಖ ಸದಸ್ಯರೆಂದು ಎನ್‌ಐಎ ತಿಳಿಸಿದೆ.
ಬಂಧಿತ ಆರೋಪಿಗಳನ್ನು ಯಾಸಿರ್ ನಿಯಾಮತುಲ್ಲಾ ಹಾಗೂ ಅತಾವುಲ್ಲಾ ರಹ್ಮಾನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಯಾಸಿರ್ ನಿಯಾಮತುಲ್ಲಾ ಉಗ್ರಗಾಮಿ ಗುಂಪಿನ ಮುಖ್ಯಸ್ಥನಾಗಿದ್ದರೆ, ಅತಾವುಲ್ಲಾ ನಿಧಿ ಸಂಗ್ರಹಿಸುವ ಹೊಣೆ ಹೊತ್ತಿದ್ದ ಎಂದು ತೆಲಂಗಾಣ ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಐಸಿಸ್ ಜೊತೆ ಸಂಪರ್ಕ ಹೊಂದಿದೆಯೆಂದು ಶಂಕಿಸಲಾದ ಭಯೋತ್ಪಾದಕ ಜಾಲದಲ್ಲಿ ಶಾಮೀಲಾದ ಆರೋಪದಲ್ಲಿ ಹೈದರಾಬಾದ್‌ನ ಐವರು ಯುವಕರನ್ನು ಎನ್‌ಐಎ ಜೂನ್ 29ರಂದು ಬಂಧಿಸಿತ್ತು . ಇವರು ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲು ಸಂಚು ಹೂಡಿದ್ದಾರೆಂದು ಎನ್‌ಐಎ ಆರೋಪಿಸಿದೆ. ಆರೋಪಿಗಳನ್ನು ಜುಲೈ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಆರೋಪಿಗಳು ನಗರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು ಹಾಗೂ ಅವರು ಐಸಿಸ್ ಜೊತೆ ಸಂಪರ್ಕವೇರ್ಪಡಿಸಿಕೊಂಡಿದ್ದರೆಂದು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಆರೋಪಿಸಿದೆ.