ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನಿನ ಮಳೆ!
ಮುಂಬೈ, ಜು.12: ಮಹಾರಾಷ್ಟ್ರ ರಾಜ್ಯದ ಮುಂಬೈ ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ಮೀನಿನ ಮಳೆ ಸುರಿದಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಆಂಧ್ರಪ್ರದೇಶದ ವಿಜಯವಾಡದಲ್ಲೂ ಮೀನಿನ ಮಳೆ ಸುರಿದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಂಜೆಯ ವೇಳೆ ಸುರಿದ ಭಾರೀ ಮಳೆಯಲ್ಲಿ ಮೀಸೆಯನ್ನು ಹೊಂದಿದ ಮುಗುಡು ಜಾತಿಗೆ ಸೇರಿದ ನೂರಾರು ಮೀನುಗಳು ಬಿದ್ದಿವೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದ ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಬಿದ್ದು ತೆವಳುತ್ತಿದ್ದ ಮೀನುಗಳನ್ನು ಹಿಡಿಯಲು ಪುರುಷರು, ಮಹಿಳೆಯರು, ಮಕ್ಕಳು ಮುಗಿ ಬಿದ್ದರು. ಸ್ಥಳೀಯರೊಂದಿಗೆ ಹೆದ್ದಾರಿಯಲ್ಲಿ ಸಂಚಾರಿಸುತ್ತಿದ್ದ ಪ್ರಯಾಣಿಕರು ಕೂಡಾ ತಮ್ಮ ವಾಹನಗಳನ್ನು ನಿಲ್ಲಿಸಿ ಮೀನುಗಳನ್ನು ಹೆಕ್ಕಿ ಚೀಲಗಳಿಗೆ ತುಂಬಿಸುವ ದೃಶ್ಯಗಳು ಕಂಡು ಬಂದಿವೆ.
ಮಳೆಗಾಲದ ಸಂದರ್ಭದಲ್ಲಿ ಪ್ರಪಂಚದ ವಿವಿಧ ದೇಶಗಳಲ್ಲಿ ಮೀನಿನ ಮಳೆ ಸುರಿದ ಹತ್ತು ಹಲವು ಉದಾಹರಣೆಗಳಿವೆ. ವಾಯುಭಾರ ಕುಸಿತದಿಂದ ಸಮುದ್ರದ ಮಧ್ಯ ಭಾಗದಲ್ಲಿ ಉಂಟಾಗುವ ಸುಳಿ ಗಾಳಿಯಿಂದಾಗಿ ಸಮುದ್ರದ ಮೀನುಗಳು ಮೋಡವನ್ನು ಸೇರಿ ಮಳೆಯೊಂದಿಗೆ ಸುರಿಯುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.