ಮೂಡುಬಿದಿರೆ: ಕರಿಂಜೆ ವಾರ್ಡ್ ಕಾಂಗ್ರೆಸ್ ಮಡಿಲಿಗೆ

Update: 2016-07-13 06:54 GMT

ಮೂಡುಬಿದಿರೆ, ಜು.13: ಇಲ್ಲಿನ ಪುರಸಭೆಯ ಕರಿಂಜೆ 21ನೆ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನೋದ್ ಸೆರಾವೋ ಅವರು ಬಿಜೆಪಿ ಅ್ಯರ್ಥಿ ಯಶವಂತ ಶೆಟ್ಟಿ ಅವರನ್ನು 94 ಮತಗಳಿಂದ ಸೋಲಿಸಿ ವಿಜಯಿಯಾಗಿದ್ದಾರೆ.

ಬುಧವಾರ ಬೆಳಗ್ಗೆ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ನ ವಿನೋದ್ ಸೆರಾವೋ 551 ಮತಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಶವಂತ ಶೆಟ್ಟಿಯವರು 457 ಮತಗಳನ್ನು ಪಡೆದಿದ್ದಾರೆ. ಈ ಚುನಾವಣೆಯಲ್ಲಿ 9 ನೋಟಾ ಮತಗಳು ಚಲಾವಣೆಯಾಗಿದ್ದು, 94 ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆದ್ದಿದೆ.

ಜುಲೈ 10ರಂದು ಮೂಡುಬಿದಿರೆ ಕರಿಂಜೆ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಚನಾವಣೆ ಪ್ರತಿಷ್ಠೆಯ ವಿಷಯವಾಗಿತ್ತು. ಈ ಹಿಂದೆ ಈ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನಿಲ್ ಲೋಬೊ ವಿಜಯಿಯಾಗಿದ್ದರು. ಅದನ್ನು ಪ್ರಶ್ನಿಸಿ ಸೋತಿದ್ದ ಬಿಜೆಪಿ ಅ್ಯರ್ಥಿ ಕೃಷ್ಣರಾಜ ಹೆಗ್ಡೆಯವರು ಕೋರ್ಟಿನ ಮೆಟ್ಟಿಲೇರಿದ್ದರು. ಕೋರ್ಟು ತೀರ್ಪು ಕೃಷ್ಣರಾಜ ಹೆಗ್ಡೆಯವರ ಪರವಾಗಿ ಬಂದಿತ್ತಾದರೂ ಅವರಿಗೆ ಸದಸ್ಯತ್ವ ಸಿಕ್ಕಿರಲಿಲ್ಲ. ಆದ್ದರಿಂದ ಈ ವಾರ್ಡ್‌ಗೆ ಮತ್ತೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸೆರಾವೋ ಗೆಲುವನ್ನು ಅಭಿನಂದಿಸಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ತೆರಳಿ ಸಂಭ್ರಮಾಚರಣೆ ನಡೆಸಲಾಯಿತು.

ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಬಿಜೆಪಿ ಈ ಬಾರಿಯ ವಿಜಯೋತ್ಸವ ನಡೆಸುವ ಉತ್ಸಾಹದಲ್ಲಿತ್ತು. ಆದರೆ ಜನರು ಅವರ ಆಸೆಗೆ ತಣ್ಣೀರೆರಚಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್‌ನ ಅಭಿವೃದ್ಧಿ ಕೆಲಸಗಳಿಗಾಗಿ ಮನೆಮನೆಗೆ ತೆರಳಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಇದು ಜನರ ತೀರ್ಪು ಎಂದಿದ್ದಾರೆ.

ವಿನೋದ್ ಸೆರಾವೋ ಮಾತನಾಡಿ, ಈ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು. ಶಾಸಕ ಅಭಯಚಂದ್ರ ಜೈನ್ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದರಿಂದ ಜನ ಅದನ್ನು ಗುರುತಿಸಿದ್ದಾರೆ. ಪುರಸಭಾ ವ್ಯಾಪ್ತಿಯ ನನ್ನ ವಾರ್ಡ್‌ನಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News