ರೊನಾಲ್ಡೊ ವಿಶ್ವದ ಐದನೆ ಶ್ರೀಮಂತ ಸೆಲೆಬ್ರಿಟಿ
ಲಂಡನ್, ಜು.13: ಯುರೋ ಚಾಂಪಿಯನ್‌ಶಿಪ್ ವಿಜೇತ ನಾಯಕ ಹಾಗೂ ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಗಣ್ಯವ್ಯಕ್ತಿಗಳ ಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದ್ದಾರೆ.
ಸಂಭಾವನೆ ಹಾಗೂ ಜಾಹೀರಾತು ಆದಾಯ ಸಹಿತ ರೊನಾಲ್ಡೊ ವಾರ್ಷಿಕವಾಗಿ ಒಟ್ಟು 88 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದಾರೆ. ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರೊನಾಲ್ಡೊ ಟಾಪ್-5ರಲ್ಲಿದ್ದಾರೆ ಎಂದು ಫೋರ್ಬ್ಸ್ ಪ್ರಕಟಿಸಿದ ಹೊಸ ಅಂಕಿ-ಅಂಶದಲ್ಲಿ ತಿಳಿದುಬಂದಿದೆ.
ದತ್ತಾಂಶಗಳ ಪ್ರಕಾರ, 31ರ ಹರೆಯದ ರೊನಾಲ್ಡೊ ಸಂಭಾವನೆ ಮೂಲಕ 55 ಮಿಲಿಯನ್ ಡಾಲರ್ ಹಾಗೂ ಜಾಗತಿಕ ಬ್ರಾಂಡ್‌ಗಳಾದ ನೈಕ್, ಸಕೂರ್ ಬ್ರದರ್ಸ್ ಸೂಟ್ಸ್ ಹಾಗೂ ಮಾನ್‌ಸ್ಟರ್ ಹೆಡ್‌ಫೋನ್‌ಗಳ ಮೂಲಕ ಉಳಿದ ಆದಾಯವನ್ನು ಗಳಿಸುತ್ತಿದ್ದಾರೆ. ಆದಾಯ ಗಳಿಕೆಯಲ್ಲಿ ರೊನೊಲ್ಡೊ ಅವರು ಬಾರ್ಸಿಲೋನದ ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿಯವರನ್ನು ಹಿಂದಿಕ್ಕಿದ್ದಾರೆ.
ಮೆಸ್ಸಿ 8ನೆ ಶ್ರೀಮಂತ ಸೆಲೆಬ್ರಿಟಿ ಹಾಗೂ ಎರಡನೆ ಶ್ರೀಮಂತ ಫುಟ್ಬಾಲ್ ಆಟಗಾರನಾಗಿದ್ದಾರೆ. ಬಾಸ್ಕಟ್‌ಬಾಲ್ ಐಕಾನ್ ಲೆಬ್ರಾನ್ ಜೇಮ್ಸ್(77 ಮಿಲಿಯನ್ ಡಾಲರ್) ಮೂರನೆ ಶ್ರೀಮಂತ ಕ್ರೀಡಾ ಸೆಲೆಬ್ರಿಟಿ. ಸಂಗೀತಗಾರ ಟೇಲರ್ ಸ್ವಿಫ್ಟ್ 170 ಮಿಲಿಯನ್ ಡಾಲರ್ ಆದಾಯ ಗಳಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.