×
Ad

ಪರೀಕ್ಷಾ ಪದ್ಧತಿ ಲೋಪದೋಷ ನಿವಾರಣೆಗೆ ಕ್ರಮ: ಪ್ರೊ.ಕೆ.ಬೈರಪ್ಪ

Update: 2016-07-13 15:33 IST

ಮಂಗಳೂರು,ಜು.13: ಕಳೆದ ಬಾರಿ ಪರೀಕ್ಷಾ ಪದ್ಧತಿಯಲ್ಲಿ ಕಂಡು ಬಂದ ಲೋಪ ದೋಷಗಳನ್ನು ಪ್ರತಿ ಹಂತದಲ್ಲೂ ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾದ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ.ಕೆ. ಬೈರಪ್ಪ ತಿಳಿಸಿದ್ದಾರೆ.

ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮಕಾರಂತ ಸಭಾಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಉತ್ತರ ನೀಡಿದರು.

ಲೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕೆಲ ಕಚೇರಿ ಸಿಬ್ಬಂದಿಗೆ ಒಟ್ಟು 8 ತರಬೇತಿ ಕಾರ್ಯಾಗಾರಗಳ ಮೂಲಕ ಮಾಹಿತಿ ನೀಡಲಾಗಿದೆ. ಮಾತ್ರವಲ್ಲದೆ ಪರೀಕ್ಷಾ ಕೊಠಡಿಗಳಲ್ಲಿ ಸಂವೀಕ್ಷರಾಗಿರುವವರು (ಇನ್‌ವಿಜಿಲೇಟರ್) ವಿದ್ಯಾರ್ಥಿ ತನ್ನ ರಿಜಿಸ್ಟರ್ ನಂಬ್ರ, ಪ್ರಶ್ನೆ ಪತ್ರಿಕೆಯ ಕೋಡ್ ನಂ.ನ್ನು ನಮೂದಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕಳೆದ ಬಾರಿ 35 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ರಿಜಿಸ್ಟರ್ ಸಂಖ್ಯೆಯೇ ನಮೂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂವೀಕ್ಷಕರನ್ನು ಕರೆಯಿಸಿ ಅವರಿಗೆ ದಂಡ ಹಾಕುವ ಮೂಲಕ ಅವರು ನಿರ್ವಹಿಸಬೇಕಿದ್ದ ಕಾರ್ಯದ ಬಗ್ಗೆ ಮನವರಿಕೆ ಮಾಡಲಾಗಿದೆ. ಈ ಬಾರಿ ಇಂತಹ ದೋಷಗಳು ಸಾಕಷ್ಟು ನಿವಾರಣೆಯಾಗಿದ್ದು, ಇಂತಹ ಮೇಲ್ವಿಚಾರಣಾ ಕ್ರಮಗಳಿಂದಾಗಿಯೇ ಪರೀಕ್ಷಾ ಫಲಿತಾಂಶ 10 ದಿನಗಳ ಕಾಲ ತಡವಾಗಿದೆ. ಪ್ರಸಕ್ತ ಸಾಲಿನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ನಿನ್ನೆಯಿಂದ ಪ್ರಕಟಿಸಲಾಗಿದೆ ಎಂದು ಪ್ರೊ. ಬೈರಪ್ಪ ತಿಳಿಸಿದರು.

ಸಂಶೋಧನೆಗೆ ಹೆಚ್ಚು ಒತ್ತು

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕೆಂಬ ಉದ್ದೇಶದಿಂದ ಕಾಲೇಜುಗಳ ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರ ಜತೆ ಬೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲದೆ 10 ವರ್ಷಗಳ ಬೋಧನಾ ಅನುಭವ, ಸಂಶೋಧನಾ ಅನುಭವ ಇರುವವರನ್ನು ಶೈಕ್ಷಣಿಕ ಅಧ್ಯಯನ ಮಂಡಳಿಗೆ ಸೇರಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ ಎಂದು ಪ್ರೊ. ಬೈರಪ್ಪ ಹೇಳಿದರು.

ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯ ಕುಮಾರ್, ಮಾಧ್ಯಮ ಸಮಿತಿಯ ಮೋಹನ್‌ಚಂದ್ರ ನಂಬಿಯಾರ್, ಲೋಕೇಶ್, ಕೆ.ಎನ್. ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News