ಮಂಗಳೂರು ವಿ.ವಿ.ಯಲ್ಲಿ ಜು.15ರಿಂದ ‘ಕ್ಯಾಂಪಸ್/ ಕಾಲೇಜು ನೋಡಬನ್ನಿ’ ಕಾರ್ಯಕ್ರಮ
ಮಂಗಳೂರು,ಜು.13: ಸ್ಥಳೀಯ ವಿಶ್ವವಿದ್ಯಾನಿಲಯ ಹಾಗೂ ಕೊಡಗಿನಲ್ಲಿರುವ ಸ್ನಾತಕೋತ್ತರ ಕೇಂದ್ರ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಜುಲೈ 15ರಿಂದ 19ರವರೆಗೆ ‘ಕ್ಯಾಂಪಸ್/ ಕಾಲೇಜು ನೋಡಬನ್ನಿ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಕೆ. ಬೈರಪ್ಪ ಈ ಬಗ್ಗೆ ಮಾಹಿತಿ ನೀಡಿದರು.
ಜುಲೈ 15ರಂದು ಬೆಳಗ್ಗೆ 10:30ಕ್ಕೆ ಮಂಗಳಗಂಗೋತ್ರಿ ಕ್ಯಾಂಪಸ್‌ನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಉದ್ಘಾಟಿಸುವರು. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ವಿವಿದ ಸ್ನಾತಕೋತ್ತರ ಕೋರ್ಸ್‌ಗಳ ಕುರಿತ ಪ್ರಕಟನೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಬಾರಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸೌಲಭ್ಯಗಳು, ಪ್ರಾಧ್ಯಾಪಕರ ಸಾಧನೆಗಳು, ಉದ್ಯೋಗಾವಕಾಶಗಳು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಜುಲೈ 15 ಮತ್ತು 16ರಂದು ಓಪನ್ ಹೌಸ್ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ವಿವಿ ಆಡಳಿತಕ್ಕೆ ಒಳಪಟ್ಟ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಜು. 18ರಂದು ಮತ್ತು ಕುಶಾಲನಗರ ಸಮೀಪದ ಚಿಕ್ಕಾಳುವಾರು ಸ್ನಾತಕೋತ್ತರ ಕೇಂದ್ರದಲ್ಲಿ ಜು. 19ರಂದು ಮುಕ್ತ ಮುಖಾಮುಖಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಆಯ್ಕೆ ಮಾಡಲಿರುವ ವಿದ್ಯಾರ್ಥಿಗಳು ಆಯಾ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಬೋಧ ವರ್ಗದೊಂದಿಗೆ ನೇರ ಸಮಾಲೋಚನೆ ಮಾಡುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.