ತುಂಬೆ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಎಸ್‌ಎಫ್‌ಐ ಆಗ್ರಹ
ವಿಟ್ಲ, ಜು.13: ತುಂಬೆ ಖಾಸಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಕಡೆಗೋಳಿ-ಕುಮ್ಡೇಲು ಎಂಬಲ್ಲಿನ ನಿವಾಸಿ ಪ್ರಸಾದ್ ಆಚಾರ್ಯ ಎಂಬವರ ಪುತ್ರಿ, ತುಂಬೆ ಖಾಸಗಿ ಶಾಲೆಯ 5ನೆ ತರಗತಿ ವಿದ್ಯಾರ್ಥಿನಿ ಪೂಜಾಶ್ರೀ (10) ಎಂಬಾಕೆ ಸೋಮವಾರ ಸಂಜೆ ಮನೆಯ ಕೋಣೆಯ ಕಿಟಕಿಗೆ ನೇಣು ಬಿಗಿದು ನಿಗೂಢವಾಗಿ ಆತ್ಮಹತ್ಯಗೆ ಶರಣಾಗಿದ್ದಳು.
ಮೃತ ಬಾಲಕಿಯ ಮನೆಗೆ ಹಾಗೂ ಶಾಲೆಗೆ ಭೇಟಿ ನೀಡಿದ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ತುಳಸೀದಾಸ್, ಕಾರ್ಯಕರ್ತರಾದ ಸಲೀಂ ಹಾಗೂ ಸುಹಾಸ್ ನೇತೃತ್ವದ ನಿಯೋಗ ಬುಧವಾರ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತನಿಖೆಗೊಳಪಡಿಸಿ ತೀರಾ ಎಳೆಯ ಪ್ರಾಯದಲ್ಲಿ ಬಾಲಕಿ ಆತ್ಮಹತ್ಯೆಯಂತಹ ಮಾರಕ ಮಾನಸಿಕ ಸನ್ನಿವೇಶಕ್ಕೆ ಒಳಗಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು. ಜೊತೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು ಮಾನಸಿಕ ಬೆಳವಣಿಗೆಯನ್ನು ಗಟ್ಟಿಗೊಳಿಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಶಿಕ್ಷಣ ಇಲಾಖೆಯನ್ನೂ ಒತ್ತಾಯಿಸಿದ್ದಾರೆ.