ಜು.16ರಂದು ರೈತಸಂಘದಿಂದ ಕಡಬ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

Update: 2016-07-13 14:30 GMT

ಪುತ್ತೂರು, ಜು.13: ರಾಜ್ಯ ಸರಕಾರವು ಕಾನೂನು ಬಾಹಿರವಾಗಿ ಜಿಲ್ಲೆಯ ಜೀವನದಿಯಾದ ಕುಮಾರಧಾರ ನದಿಗೆ 7 ಕಡೆಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟು ನಿರ್ಮಾಣ ವಾಡಲು ಖಾಸಗಿ ಕಂಪೆನಿಗಳಿಗೆ ಗೌಪ್ಯವಾಗಿ ಅನುಮತಿ ನೀಡಿದ್ದು, ಪರಿಸರಕ್ಕೆ ಹಾನಿಮಾಡುವ ಹಾಗೂ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿರುವ ಈ ಯೋಜನೆಯನ್ನು ವಿರೋಧಿಸಿ ಜುಲೈ 16ರಂದು ರಾಜ್ಯ ರೈತ ಸಂಘ -ಹಸಿರುಸೇನೆ ಹಾಗೂ ಉರುಂಬಿ ಅಣೆಕಟ್ಟು ವಿರೋಧಿ ಹೋರಾಟ ಸಮಿತಿಯ ವತಿಯಿಂದ ಕಡಬ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವುದು. ರಾಜ್ಯದ ವಿವಿಧ ಜಿಲ್ಲೆಗಳ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದರು.

ಕುಮಾರಧಾರಾ ನದಿಯಲ್ಲಿ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ 7 ಕಡೆಗಳಲ್ಲಿ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟುಗಳನ್ನು ನಿರ್ಮಾಣ ರಾಜ್ಯ ಸರಕಾರ ಖಾಸಗಿ ಕಂಪೆನಿಗಳಿಗೆ ಗೌಪ್ಯವಾಗಿ ಅನುಮತಿ ನೀಡಿದ್ದು, ಈ ಪೈಕಿ ಈಗಾಗಲೇ ಕೊಲ ಗ್ರಾಮದ ಪರಂಗಾಜೆ, ಕೊಣೆಮಜಲು ಮತ್ತು ಉರುಂಬಿಯ ಬಳಿ ಮೂರು ಕಡೆಗಳಲ್ಲಿ ಅಣೆಕಟ್ಟು ನಿರ್ಮಿಸಲು ಸರ್ವೇ ಕಾರ್ಯಕ್ಕೆ ಕಂಪೆನಿಗಳು ಮುಂದಾಗಿವೆ. ಇಲ್ಲಿ ಅಣೆಕಟ್ಟುಗಳು ನಿರ್ಮಾಣವಾದರೆ ನದಿ ಪಾತ್ರದ ಇಕ್ಕೆಲಗಳಲ್ಲಿರುವ ಸುಮಾರು 18 ಗ್ರಾಮಗಳ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗಲಿದೆ. ಸಾವಿರಾರು ಎಕರೆ ಅರಣ್ಯ ನಾಶವಾಗಲಿದ್ದು, ನೂರಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಅವರು ತಿಳಿಸಿದರು.

ಖಾಸಗಿ ಕಂಪೆನಿಗಳು ಯಾವುದೇ ಅನುಮತಿ ಇಲ್ಲದೆ ಭೂಸರ್ವೇ ಮಾಡುವ ಕಾರ್ಯ ಪ್ರಾರಂಭಿಸಿವೆ. ಸರಕಾರ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ದಬ್ಬಾಳಿಕೆಯ ಮೂಲಕ ಕಂಪೆನಿಗಳು ರೈತರನ್ನು ಆತಂಕಕ್ಕೆ ಒಡ್ಡುತ್ತಿವೆ. ಸರ್ವೇ ಕಾರ್ಯದ ಬಗ್ಗೆ ರೈತರಿಗೆ ಯಾವುದೇ ಪೂರ್ವ ಮಾಹಿತಿ ನೀಡಲಾಗಿಲ್ಲ. ಯೋಜನೆಯ ಬಗ್ಗೆ ಸ್ಷಷ್ಟತೆಯೂ ಇಲ್ಲ. ಮುಳುಗಡೆಯಾಗಲಿರುವ ಭೂಮಿಯ ಮಾಹಿತಿಯೂ ಇಲ್ಲ. ಈ ಬಗ್ಗೆ ಜನತೆ ಧ್ವನಿ ಎತ್ತಿದ್ದರೂ ಸರಕಾರ ಜನತೆಯ ಮಾತಿಗೆ ಕಿಂಚಿತ್ತು ಬೆಲೆ ಕೊಡದ ಕಾರಣ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಸಲುವಾಗಿ ಮುತ್ತಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಲವಿದ್ಯುತ್ ಯೋಜನೆಗಳು ಯಾವ ಭಾಗದಲ್ಲಿಯೂ ಯಶಸ್ವಿಯಾಗಿಲ್ಲ. ಆದ್ದರಿಂದ ಈ ಯೋಜನೆಗಳಿಗೆ ಸರಕಾರ ಅನುಮತಿ ನೀಡಬಾರದು. ಜಲವಿದ್ಯುತ್‌ಗಾಗಿ ಅಣೆಕಟ್ಟು ನಿರ್ಮಾಣ ಮಾಡಲೇಬಾರದು. ಸರಕಾರ ಈ ಅಣೆಕಟ್ಟು ನಿರ್ಮಾಣಕ್ಕೆ ನೀಡಲಾಗುವ 70% ಸಬ್ಸಿಡಿಯನ್ನು ನುಂಗುವ ಉದ್ದೇಶದಿಂದ ಮಾತ್ರ ಖಾಸಗಿ ಕಂಪೆನಿಗಳು ಈ ಅಣೆಕಟ್ಟು ನಿರ್ಮಾಣದ ಕೆಲಸಕ್ಕೆ ಇಳಿದಿವೆಯೇ ಹೊರತು ಅಭಿವೃದ್ಧಿ ದೃಷ್ಟಿಯಿಂದಲ್ಲ ಎಂದ ಅವರು ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಯಾವುದೇ ಇಲಾಖೆಗಳ ಅನುಮತಿ ಪಡೆಯದೆ ಅನುಷ್ಠಾನಕ್ಕೆ ಮುಂದಾಗಿರುವ ಈ ಬೋಗಸ್ ಯೋಜನೆಯಿಂದಾಗಿ ಕೃಷಿಕರಲ್ಲಿ ಭಯದ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದರು.

ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಶೆಟ್ಟಿ ಬೈಲುಗುತ್ತು ಮಾತನಾಡಿ, ಈ ಹಿಂದೆ ಅಣೆಕಟ್ಟುಗಳ ವಿರುದ್ಧ ಹೋರಾಟ ಮಾಡಿದ್ದ ಶೋಬಾ ಕರಂದ್ಲಾಜೆ ಅವರೇ ಇಂಧನ ಸಚಿವರಾಗಿದ್ದಾಗ ಈ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು. ಜಲವಿದ್ಯುತ್ ಯೋಜನೆಯಡಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದರ ವಿರುದ್ಧ ನಮ್ಮ ಹೋರಾಟ ಹೊರತು, ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರೈತ ಸಂಘ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News