ಸಂಪೂರ್ಣ ಹದೆಗೆಟ್ಟ ಕಳ್ಳಿಗೆ ಗ್ರಾಮದ ರಸ್ತೆ: ಹೈಕೋರ್ಟ್‌ನಲ್ಲಿ ದಾವೆ ಹೂಡುವ ಎಚ್ಚರಿಕೆ
ಬಂಟ್ವಾಳ, ಜು. 13: ಸಂಪೂರ್ಣ ಹದೆಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ತಾಲೂಕಿನ ಕಳ್ಳಿಗೆ ಗ್ರಾಮದ ದರಿಬಾಗಿಲಿನಿಂದ ನೆತ್ರಕೆರೆ - ಬೆಂಜನಪದವು ರಸ್ತೆ ಮತ್ತು ಜಾರದಗುಂಡಿಯಿಂದ ಕನಪಾಡಿ - ಬೆದ್ರಾಡಿ ವರೆಗಿನ 6 ಕಿಲೋ ಮೀಟರ್ ರಸ್ತೆಯ ಕಾಮಗಾರಿಯನ್ನು ಮಳೆಗಾಲ ಮುಗಿದಾಕ್ಷಣ ಕೈಗೆತ್ತಿಕೊಳ್ಳದಿದ್ದರೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್ ಎಚ್ಚರಿಸಿದ್ದಾರೆ.
ಬಧವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಫೆಬ್ರವರಿ ತಿಂಗಳಲ್ಲಿ ಬರೆದ ಪತ್ರದ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ತುರ್ತು ಸ್ಪಂದನೆ ನೀಡಿ ಈ ರಸ್ತೆಯ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅದರಂತೆ ಬಂಟ್ವಾಳ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಈ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ಪುನರ್ ನಿರ್ಮಾಣ ಕಾಮಗಾರಿಗೆ ಒಟ್ಟು ಮೂರೂವರೆ ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಅನುದಾನ ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಪುರಸ್ಕರಿಸಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿ ಮಳೆಗಾಲ ಮುಗಿದಾಕ್ಷಣ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ರಸ್ತೆ ಅಭಿವೃದ್ಧಿಪಡಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಹೈ ಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಹೇಳಿದರು.
ಕಳ್ಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಸ್ವ ಗ್ರಾಮವಾಗಿದ್ದು ಇದೇ ರಸ್ತೆಯಲ್ಲಿ ಅವರು ದಿನನಿತ್ಯ ಓಡಾಡುತ್ತಿದ್ದಾರೆ. ಸಚಿವರ ಸಹಿತ ಸಂಸದ ನಳೀನ್ ಕುಮಾರ್ ಕಟೀಲ್‌ರ ಗಮನಕ್ಕೂ ಈ ರಸ್ತೆ ಅಭಿವೃದ್ಧಿಗೆ ಕೋರಿ ಮನವಿ ಸಲ್ಲಿಸಲಾಗಿದೆ ಎಂದ ಅವರು, ಇವರಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರಧಾನಿಯವರಿಗೆ ಪತ್ರ ಬರೆಯಲಾಗಿತ್ತು. ಇದೀಗ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದೇವೆ. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಖಂಡಿತ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲದೆ ಗ್ರಾಮದ ಹಿತ ದೃಷ್ಠಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಅದೇ ರೀತಿ ಕಳ್ಳಿಗೆ ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕಳ್ಳಿಗೆ ಗ್ರಾಮವನ್ನು ಸ್ಮಾರ್ಟ್ ವಿಲೇಜ್ ಯೋಜನೆಗೆ ಸೇರಿಸಿಕೊಳ್ಳಲು ಪ್ರಧಾನಿಯವರ ಬಳಿಗೆ ಗ್ರಾಮಸ್ಥರ ನಿಯೋಗವೊಂದನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಈ ಸಂಬಂಧ ಪ್ರಧಾನಿಯವರ ಅನುಮತಿಗಾಗಿ ಕಾಯಲಾಗುತ್ತಿದೆ. ಹಾಗೆಯೇ ಬ್ರಹ್ಮರಕೂಟ್ಲುವಿನ ಬ್ರಹ್ಮ ಸನ್ನಿಧಿಯ ಬಳಿ ದ್ವಿಮುಖ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಟೋಲ್ ಪ್ಲಾಝಾ ಬಳಿ 4+4 ಆಗಿ ರಸ್ತೆಯನ್ನು ಅಗಲೀಕರಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಶೀಘ್ರದಲ್ಲೇ ನಡೆಯಲಿದೆ. ಹಾಗೆಯೇ ಇಲ್ಲಿನ ಎರಡು ಬಸ್ ತಂಗುದಾಣವನ್ನು ನಿರ್ಮಿಸಿಕೊಡುವ ಬಗ್ಗೆ ರಾ.ಹೆ.ಪ್ರಾ.ದ ಯೋಜನಾ ನಿರ್ದೇಶಕರು ಲಿಖಿತ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಬ್ರಹ್ಮರಕೊಟ್ಲುವಿನ ದರಿಬಾಗಿಲು ಎಂಬಲ್ಲಿ ರೈಲು ತಂಗುದಾಣವನ್ನು ನಿರ್ಮಿಸಬೇಕೆಂಬ ತಮ್ಮ ಬೇಡಿಕೆಗೆ ರೈಲ್ವೆ ಸಚಿವರಿದಂಲೂ ಸ್ಪಂದನೆ ದೊರೆತಿದ್ದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಇಲ್ಲಿ ರೈಲು ತಂಗುದಾಣಕ್ಕೆ ಮಂಜೂರಾತಿ ದೊರಕುವ ಭರವಸೆ ಇದೆ. ಐದು ತಿಂಗಳಿನಿಂದ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಓರ್ವ ಪಂಚಾಯತ್ ಸದಸ್ಯನ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಪ್ರಧಾನಿ ಸೇರಿದಂತೆ ವಿವಿಧ ಇಲಾಖೆಗಳಿಗೆ ನಿರಂತರವಾಗಿ ಹತ್ತಾರು ಪತ್ರ ವ್ಯವಹಾರ ನಡೆಸಲಾಗಿದ್ದು ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಮಹೇಶ್ ಚಂದ್ರಿಗೆ, ಬ್ರಹ್ಮರಕೊಟ್ಲು ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾಧವ ಎಂ. ಪೂಜಾರಿ, ಕಳ್ಳಿಗೆ ಗ್ರಾಮ ಸಮಿತಿ ಬಿಜೆಪಿಯ ಪ್ರ.ಕಾರ್ಯದರ್ಶಿ ನವೀನ್ ಪೆರಿಯೋಡಿ, ಮನೋಜ್ ವಳವೂರು ಉಪಸ್ಥಿತರಿದ್ದರು.