ಮೂಡುಬಿದಿರೆ: ಪುರಾತನ ಆದಿಶಕ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಮೂಡುಬಿದಿರೆ, ಜು.13: ಇಲ್ಲಿನ ಸ್ವರಾಜ್ಯ ಮೈದಾನ ಪರಿಸರದಲ್ಲಿ ನವೀಕೃತ ಶಿಲಾಮಯ ದೇವಸ್ಥಾನದಲ್ಲಿ ಪುರಾತನ ಆದಿಶಕ್ತಿ ದೇವಸ್ಥಾನದ ಮಾರಿಯಮ್ಮ ಬಿಂಬ ಪುನಃಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಬುಧವಾರ ಜರಗಿತು.
ಕಳೆದ ಶನಿವಾರದಿಂದ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು, ಹಾಲಾಡಿ ವಾಸುದೇವ ಜೋಯಿಸ ಮತ್ತು ವೈದಿಕ ಬಳಗದವರಿಂದ ಬುಧವಾರ ಬೆಳಗ್ಗೆ ಶ್ರೀ ದೇವಿಯ ಬಿಂಬ ಪುನಃ ಪ್ರತಿಷ್ಠೆಯ ಸಂಭ್ರಮ, ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ ನಡೆಯಿತು.
ದೇವಳದ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ. ಶ್ರೀಧರ ಬೋವಿ, ಪ್ರಧಾನ ಕಾರ್ಯದರ್ಶಿ ಎಂ. ಉಮೇಶ ಬೋವಿ, ಕಾರ್ಯದರ್ಶಿ ಎಂ. ಲಕ್ಷ್ಮಣ ಬೋವಿ, ಕೋಶಾಧಿಕಾರಿ ಎಂ.ಸುಂದರ ಬೋವಿ ಸಹಿತ ಬೋವಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪುನಃ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿಯಾಗಿ ನಾಗದೇವರ ಕಲಾ ಸಂಕೋಚ, ವಾಸ್ತು ರಾಕ್ಷೋಘ್ನಾದಿಗಳು, ಅಧಿವಾಸ ಪೂಜಾ, ಅಧಿವಾಸ ಹೋಮ, ನಾಗಶಿಲಾ ಪ್ರತಿಷ್ಠೆ, ಸರ್ವಪ್ರಾಯಶ್ಚಿತ್ತ ಆಶ್ಲೇಷಾ ಬಲಿದಾನ, ಶ್ರೀ ದೇವಿಯ ಕಲಾ ಸಂಕೋಚ ತತ್ಸಂಬಂಧೀ ಧಾರ್ಮಿಕ ಪ್ರಕ್ರಿಯೆಗಳು ಜರಗಿದವು.