ಪಾನ್‌ಮಸಾಲಾ ಉತ್ಪನ್ನ ಅಕ್ರಮ ಸಾಗಾಟ: ಇಬ್ಬರ ಸೆರೆ
ಕಾಸರಗೋಡು, ಜು.13: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ನಿಷೇಧಿತ ಪಾನ್‌ಮಸಾಲಾ ಉತ್ಪನ್ನಗಳನ್ನು ವಿದ್ಯಾನಗರ ಠಾಣಾ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಳಂಗರೆಯ ಅನಾಸ್ ಮತ್ತು ಜುನೈದ್ ಎಂದು ಗುರುತಿಸಲಾಗಿದೆ.
ಸುಮಾರು ಒಂದೂವರೆ ಕ್ವಿಂಟಾಲ್ ಪಾನ್ ಮಸಾಲಾ ಉತ್ಪನ್ನಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರು ಗೋಣಿ ಚೀಲಗಳಲ್ಲಿ ತುಂಬಿಸಿ ಕರ್ನಾಟಕದಿಂದ ಎರ್ನಾಕುಲಂ ಕಡೆಗೆ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್‌ರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾ.ಹೆ.ಯ ವಿದ್ಯಾನಗರ ಸಮೀಪದ ಬಿ.ಸಿ.ರೋಡ್‌ನಲ್ಲಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಪರಾರಿಯಾಗಿದ್ದು, ಬಳಿಕ ಬೆನ್ನಟ್ಟಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು.
ಕೇರಳದಲ್ಲಿ ಪಾನ್ ಮಸಾಲಾ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದ್ದು, ಈ ಹಿನ್ನಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೇರಳಕ್ಕೆ ಪಾನ್ ಮಸಾಲಾ ಉತ್ಪನ್ನಗಳು ಅಕ್ರಮವಾಗಿ ಹರಿದು ಬರುತ್ತಿದೆ. ಶಾಲಾ ಪರಿಸರ ಹಾಗೂ ಹೊರರಾಜ್ಯ ಕಾರ್ಮಿಕರನ್ನು ಕೇಂದ್ರೀಕರಿಸಿ ಸಾಗಾಟ ಹಾಗೂ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ.