.ಪ್ರತಿಭಾವಂತ ವಿದ್ಯಾರ್ಥಿನಿ ಆತ್ಮಹತ್ಯೆ
ಕಾಸರಗೋಡು, ಜು.13: ಉನ್ನತ ಶಿಕ್ಷಣಕ್ಕೆ ಸೀಟು ಸಿಗದೆ ಮನನೊಂದ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಚೌಕಿ ಮಜಲ್‌ನಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟಾಕೆಯನ್ನು ಮಜಲ್ ನಿವಾಸಿ ಸಿಂಧು (18) ಎಂದು ಗುರುತಿಸಲಾಗಿದೆ. ತಂದೆ ರಾಜನ್ ಆಟೋ ಚಾಲಕರಾಗಿದ್ದು, ತಾಯಿ ನಾರಾಯಣಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಸಹೋದರಿ ಕಾವ್ಯಾ ವಿದ್ಯಾರ್ಥಿನಿಯಾಗಿದ್ದಾರೆ. ಇವರೆಲ್ಲಾ ಮನೆಯಿಂದ ಹೊರಹೋದ ಬಳಿಕ ಈ ಕೃತ್ಯ ನಡೆಸಿದ್ದಾರೆ. ಸಂಜೆ ಶಾಲೆ ಬಿಟ್ಟು ತಾಯಿ ಮನೆಗೆ ಬಂದಾಗ ಕೊಠಡಿಯ ಬಾಗಿಲು ಮುಚ್ಚಿತ್ತು. ತೆರೆಯಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಗಾಬರಿಗೊಂಡು ನೆರೆಮನೆಯವರಿಗೆ ಮಾಹಿತಿ ನೀಡಿ ಬಾಗಿಲು ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಸಿಂಧು ಪತ್ತೆಯಾಗಿದ್ದಾರೆ.
ಪ್ಲಸ್ ಟು ಶಿಕ್ಷಣ ಪೂರ್ಣಗೊಳಿಸಿದ್ದ ಸಿಂಧು, ಪದವಿ ಶಿಕ್ಷಣಕ್ಕಾಗಿ ಕಾಸರಗೋಡು, ಕಾಞಂಗಾಡ್, ಮಂಜೇಶ್ವರ ಮತ್ತಿತರ ಕಡೆಯ ಸರಕಾರಿ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ಲಸ್‌ಟುನಲ್ಲಿ ಶೇ.80 ಅಂಕ ಲಭಿಸಿತ್ತು. ಆದರೆ ಸೀಟು ಸಿಕ್ಕಿರಲಿಲ್ಲ.
ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಆರ್ಥಿಕ ಮುಗ್ಗಟ್ಟು ಇತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಅನಿವಾರ್ಯವಿತ್ತು. ಆದರೆ ಸರಕಾರಿ ಕಾಲೇಜಿನಲ್ಲಿ ಸೀಟು ಸಿಗದ ಬೇಸರದಿಂದ ನೊಂದುಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.