ಗೃಹರಕ್ಷಕದಳದ ಪ್ಲಟೂನ್ ಸಾರ್ಜೆಂಟ್ ಸುರೇಶ್ ಶೇಠ್‌ರಿಗೆ ಸನ್ಮಾನ

Update: 2016-07-14 12:26 GMT

ಮಂಗಳೂರು, ಜು.14: ಮಂಗಳೂರು ಗೃಹರಕ್ಷಕದಳದ ಪ್ಲಟೂನ್ ಸಾರ್ಜೆಂಟ್ ಸುರೇಶ್ ಶೇಠ್ ಅವರನ್ನು ಗೃಹರಕ್ಷಕದಳ ಇಲಾಖೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮುರಲೀ ಮೋಹನ ಚೂಂತಾರು, ಸುರೇಶ್ ಸೇಠ್ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳಿಂದ ಸ್ವಾರ್ಥ ರಹಿತ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇವರ ಸುದೀರ್ಘ ಸೇವೆಯು ಇತರ ಸ್ವಯಂ ಸೇವಾ ಗೃಹರಕ್ಷಕರಿಗೆ ಮಾದರಿಯಾಗಿದೆ. ಇವರು ತಮ್ಮ ಸೇವಾವಧಿಯಲ್ಲಿ ರಾಜ್ಯದೆಲ್ಲೆಡೆ ಸಂಚರಿಸಿ ಎಲ್ಲಾ ರೀತಿಯ ತುರ್ತು ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಸಂಸ್ಥೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸಂಸ್ಥೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಶೇಠ್, ತಮ್ಮ ಸುದೀರ್ಘ ಸೇವೆಗೆ ಇಲಾಖೆಯ ಪ್ರೇರಣೆಯೇ ಕಾರಣವಾಗಿದ್ದು ಯಾವುದೇ ಸ್ವಾರ್ಥ ಇಲ್ಲದೇ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರಾಗಿ ಸೇರಿ ಸೇವೆ ಸಲ್ಲಿಸುವುದರಿಂದ ಇಲಾಖೆಯು ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ಜೂನ್ ತಿಂಗಳಿನಲ್ಲಿ ಉಳ್ಳಾಲ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ರಾಘವೇಂದ್ರ ಇವರು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News