ಪುತ್ತೂರು: ಶಿಕ್ಷಕರ ವರ್ಗಾವಣೆಗೆ ವಿರೋಧಿಸಿ ಬಿಇಒ ಕಚೇರಿ ಮುಂಭಾಗ ಧರಣಿ
ಪುತ್ತೂರು, ಜು.14: ತಾಲೂಕಿನ ಕುರಿಯ ಗ್ರಾಮದ ಇಡಬೆಟ್ಟು ಸ.ಕಿ.ಪ್ರಾ. ಶಾಲಾ ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಈ ಅದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಇಡಬೆಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಸಿರ್ ಎಚ್ಚರಿಕೆ ನೀಡಿದ್ದಾರೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಗುರುವಾರ ನಡೆದ ಪೋಷಕರ ಧರಣಿಯಲ್ಲಿ ಅವರು ಮಾತನಾಡಿದರು. ಇಡಬೆಟ್ಟು ಶಾಲೆಯಲ್ಲಿ ಮೂರು ಶಿಕ್ಷಕರ ಹುದ್ದೆಯಿದೆ. ಇದರಲ್ಲಿ ನೀನಾ ಕುವೆಲ್ಲೋ ಅವರನ್ನು ಭಕ್ತಕೋಡಿ ಶಾಲೆಗೆ ನಿಯೋಜಿಸಲಾಗಿದೆ. ಪ್ರದೀಪ್ ಹಾಗೂ ದಿನೇಶ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಐದು ತರಗತಿಗೆ ಇಬ್ಬರು ಶಿಕ್ಷಕರಿದ್ದಾರೆ. ಇದರಲ್ಲಿ ಪ್ರದೀಪ್ ಅವರನ್ನು ಕೌನ್ಸೆಲಿಂಗ್‌ನಲ್ಲಿ ಹೆಚ್ಚುವರಿ ಎಂದು ಗುರುತಿಸಿದ್ದು, ಬೇರೆಡೆಗೆ ವರ್ಗ ಮಾಡಲು ಯೋಜಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಪ್ರದೀಪ್ ಅವರ ವರ್ಗಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ವರ್ಗ ಮಾಡಿದರೆ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲೇ ಕೂರಿಸಲಾಗುವುದು ಎಂದರು.
ಕಿ.ಪ್ರಾ. ಶಾಲೆಗೆ 30 ಮಕ್ಕಳಿಗೆ ಓರ್ವ ಶಿಕ್ಷಕನಂತೆ ಕರ್ತವ್ಯ ನಿರ್ವಹಿಸಬೇಕು. ಇಡಬೆಟ್ಟು ಶಾಲೆಯಲ್ಲಿ 41 ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಶಾಲಾ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಶಾಲೆಯನ್ನು ಮುಚ್ಚುವ ಸ್ಥಿತಿ ಬಂದರೆ ಅದಕ್ಕೆ ಇಲಾಖೆಯೇ ಹೊಣೆ. ನೈತಾಡಿಯಿಂದ 2 ಕಿಲೋ ಮೀಟರ್ ದೂರದಲ್ಲಿದೆ ಇಡಬೆಟ್ಟು ಶಾಲೆ. ಮಹಿಳಾ ಶಿಕ್ಷಕರನ್ನು ಇಲ್ಲಿಗೆ ಹಾಕಿದರೆ ಕರ್ತವ್ಯ ನಿರ್ವಹಣೆ ಕಷ್ಟ. ಆದ್ದರಿಂದ ಶಿಕ್ಷಕರನ್ನು ಉಳಿಸಿಕೊಳ್ಳಬೇಕು. ಈ ಹಿಂದೆಯೂ ಮನವಿ ನೀಡಲಾಗಿದೆ. ಆದರೆ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಧರಣಿ ನಡೆಸುವುದು ಅನಿವಾರ್ಯವಾಯಿತು ಎಂದರು.
ತಾಲೂಕು ಸಂಯುಕ್ತ ರಿಕ್ಷಾ ಚಾಲಕ- ಮಾಲಕರ ಸಂಘದ ಜಯರಾಮ ಕುಲಾಲ್, ಪೋಷಕರಾದ ಸುರೇಶ್, ಮೀನಾಕ್ಷಿ, ಕುಸುಮ, ಕೈರುನ್ನೀಸಾ, ಸುಂದರಿ, ದಿಲ್‌ಶಾತ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೇಲ್ವಿಚಾರಕಿಗೆ ಮನವಿ ನೀಡಲಾಯಿತು.
ಇದೇ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ಬಜತ್ತೂರಿನ ಅಯೋಧ್ಯಾನಗರ ಹಿ.ಪ್ರಾ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಪೊರೋಳಿ ಮಾತನಾಡಿ, ಅಯೋಧ್ಯಾನಗರದಲ್ಲೂ ಇದೇ ಸಮಸ್ಯೆಯಿದೆ. ಶಾಲೆಯಲ್ಲಿ 51 ವಿದ್ಯಾರ್ಥಿಗಳಿದ್ದು, 4 ಹುದ್ದೆಯಿದೆ. ಆದರೆ ಕರ್ತವ್ಯದಲ್ಲಿ ಮೂವರು ಶಿಕ್ಷಕರಿದ್ದಾರೆ. ಶಿಕ್ಷಣ ಇಲಾಖೆ ಮಾನದಂಡದ ಪ್ರಕಾರ, ಐದನೆ ತರಗತಿವರೆಗೆ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ, 6, 7, 8ನೇ ತರಗತಿ ಒಬ್ಬರಂತೆ ಶಿಕ್ಷಕರು ಇರಬೇಕು. ಇರುವ ಮೂವರು ಶಿಕ್ಷಕರಲ್ಲಿ ಓರ್ವನನ್ನು ಕೌನ್ಸೆಲಿಂಗ್‌ನಲ್ಲಿ ಆರಿಸಿ, ವರ್ಗ ಮಾಡಲು ಆಲೋಚಿಸಲಾಗಿದೆ. ಶಿಕ್ಷಕರನ್ನು ವರ್ಗ ಮಾಡದಂತೆ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ನೀಡಲಾಗಿದೆ. ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಶಿಕ್ಷಣಾಧಿಕಾರಿ ಕಚೇರಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.