ಮಂಗಳೂರು: ಸೆಪ್ಟೆಂಬರ್‌ನಲ್ಲಿ ಐಟಿ ಉದ್ಯಮಿಗಳ ವಿಶೇಷ ಸಭೆ

Update: 2016-07-14 13:24 GMT

ಮಂಗಳೂರು,ಜು.14: ನಗರದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಬಯೊಟೆಕ್ನಾಲಜಿ ಆ್ಯಂಡ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಸರ್ವಿಸಸ್ (ಕೆಬಿಐಟಿಎಸ್) ಮತ್ತು ಐಕೆಪಿ ನಾಲೆಜ್ ಪಾರ್ಕ್‌ನ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ವಿಶೇಷ ಸಭೆಯೊಂದನ್ನು ನಡೆಸಲು ಮುಂದಾಗಿದೆ.

ಟು ಟಯರ್‌ನಗರಗಳ ಸಾಲಿನಲ್ಲಿರುವ ಮಂಗಳೂರಿನಲ್ಲಿ ಐ.ಟಿ. (ಮಾಹಿತಿ ತಂತ್ರಜ್ಞಾನ ) ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಐಟಿ, ಬಿಟಿ, ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಎಸ್‌ಡಿಎಂ), ಆರೋಗ್ಯ ರಕ್ಷಣಾ ಕ್ಷೇತ್ರಗಳ ಪ್ರತಿನಿಧಿಗಳು, ಉದ್ದಿಮೆದಾರರು ಹಾಗೂ ಜನಪ್ರತಿನಿಧಿಗಳು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೆಪ್ಟಂಬರ್ ಪ್ರಥಮ ವಾರದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಐಟಿ ಉದ್ಯಮಕ್ಕೆ ಸಂಬಂಧಿಸಿ ತಾಂತ್ರಿಕ ಅಧಿವೇಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಐಟಿ ಉದ್ಯಮಕ್ಕೆ ಸಂಬಂಧಿಸಿದ ಸುಮಾರು 200ರಷ್ಟು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಉತ್ತಮ ರಸ್ತೆ, ರೈಲ್ವೆ, ಜಲ ಸಾರಿಗೆ ವ್ಯವಸ್ಥೆ, 22 ಎಂಜಿನಿಯರಿಂಗ್ ಕಾಲೇಜು ಮತ್ತಿತರ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಇನ್ಫೋಸಿಸ್ ಹೊರತುಪಡಿಸಿದರೆ ಇತರ ದೊಡ್ಡ ಕಂಪೆನಿಗಳು ಬಂದಿಲ್ಲ. ಹಾಗಾಗಿ ಈ ಸಭೆ ಮಹತ್ವಪೂರ್ಣದ್ದಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಭಿಪ್ರಾಯಿಸಿದರು.

ಸಭೆಯಲ್ಲಿ ಕರಾವಳಿಯಲ್ಲಿ ದೊಡ್ಡ ಕೈಗಾರಿಕೆಗಳನ್ನು ಆರಂಭಿಸಲು ಪರಿಣಿತರ ಕೊರತೆ ಎದುರಾಗುತ್ತಿರುವುದು ಹಾಗೂ ಪರಿಣಿತರು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಬಗ್ಗೆ ಕೆಲ ಉದ್ಯಮಿಗಳು ಗಮನ ಸೆಳೆದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 100 ಹೊಸ ಉದ್ಯಮಗಳಿದ್ದು, ಹೆಚ್ಚಿನವುಗಳಲ್ಲಿ ಹೊಸ ತಜ್ಞರನ್ನು ಹೊಂದಿವೆ. ಪರಿಣಿತರ ಕೊರತೆ ಸಂದರ್ಭ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುವುದು ಸವಾಲಿನ ಕೆಲಸ ಎಂದು ನೋವಿಗೋ ಸೊಲ್ಯೂಶನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರವೀಣ್ ಕಲ್ಬಾವಿ ಹೇಳಿದರು.

ಐ.ಟಿ. ಉದ್ಯಮದ ಪ್ರತಿನಿಧಿ ಧೀರಜ್ ಹೆಜಮಾಡಿ ಮಾತನಾಡಿ, ಕರಾವಳಿಯಲ್ಲಿ ಐ.ಟಿ. ಉದ್ಯಮವನ್ನು ಬೆಳೆಸಲು ಕನಿಷ್ಠ ಐದು ಅಥವಾ ಆರು ದೊಡ್ಡ ಉದ್ಯಮಗಳು ಇಲ್ಲಿ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವವರಿಗಾಗಿ ಸರಕಾರ ಈಗಾಗಲೇ ವಿವಿಧ ಆಕರ್ಷಕ ಪ್ರೋತ್ಸಾಹಧನ, ಕೊಡುಗೆಗಳನ್ನು ಪ್ರಕಟಿಸಿವೆ. ಮಂಗಳೂರಿನಂತಹ ಟು ಟಯರ್ ನಗರಗಳು ಇಂತಹ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಬಿಐಟಿಎಸ್ ಜನರಲ್ ಮ್ಯಾನೇಜರ್ ಕೆ.ಎನ್. ಪ್ರವೀಣ್ ಸಲಹೆ ನೀಡಿದರು.

ಹೊಸ ಐ.ಟಿ. ಉದ್ಯಮಿಗಳಿಗಾಗಿ 10 ಸಾವಿರ ಚದರ ಅಡಿ ಭೂಮಿ ಕಾದಿರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಹಮ್ಮದ್ ನಝೀರ್, ಉಪ ಆಯುಕ್ತ (ಆಡಳಿತ) ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News