ನಿಗದಿತ ಅವಧಿಯೊಳಗೆ ಆದಾಯ ತೆರಿಗೆ ವಿವರ ನೀಡಿ : ಆರ್.ಎನ್.ಸಿದ್ದಪ್ಪಾಜಿ
ಮೂಡುಬಿದಿರೆ, ಜು.14: ಸಾರ್ವಜನಿಕರು ನಿಗದಿತ ಅವಧಿಯೊಳಗೆ ಆಸ್ತಿ ವಿವರಗಳನ್ನು ಸಲ್ಲಿಸಿದಲ್ಲಿ ಇಲಾಖೆ ಅದರ ಬಗ್ಗೆ ಮರುಪರಿಶೀಲನೆ ಅಥವಾ ತನಿಖೆ ನಡೆಸುವುದಿಲ್ಲ. ಈ ಯೋಜನೆ ಮುಗಿದ ನಂತರ ವಿವರ ಸಲ್ಲಿಸಿದರೆ ಶೇ.300ರಷ್ಟು ದಂಡ ವಿಧಿಸಲಾಗುವುದು ಎಂದು ಮಂಗಳೂರು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಆರ್.ಎನ್. ಸಿದ್ದಪ್ಪಾಜಿ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಮಂಗಳೂರು ಮತ್ತು ಲೆಕ್ಕಪರಿಶೋಧಕರ ಸಂಘ ಮೂಡುಬಿದಿರೆ ಇವುಗಳ ಜಂಟಿ ಅಶ್ರಯದಲ್ಲಿ ಇಲ್ಲಿನ ಸಮಾಜ ಮಂದಿರ ಮಿನಿ ಹಾಲ್‌ನಲ್ಲಿ ನಡೆದ ಅದಾಯ ಘೋಷಣೆ ಮಾಹಿತಿ ಶಿಬಿರದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ತೆರಿಗೆ ವ್ಯಾಪ್ತಿಗೊಳಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಚಿನ್ನ, ಆಸ್ತಿ, ಫ್ಲಾಟ್, ವಾಹನಗಳು ಇನ್ನಿತರ ಆದಾಯಗಳ ಬಗ್ಗೆ ಇದುವರೆಗೆ ಸರಕಾರಕ್ಕೆ ಸಮರ್ಪಕ ಮಾಹಿತಿ ನೀಡದೆ ಬಚ್ಚಿಟ್ಟಿದ್ದಲ್ಲಿ ಅಂತವರು ಆದಾಯ ಘೋಷಣೆ ಯೋಜನೆ ಪ್ರಕಾರ ಸರಕಾರಕ್ಕೆ ವಿವರಗಳನ್ನು ಸಲ್ಲಿಸಿದಲ್ಲಿ ಶೇ.30ರ ಕರ ಮತ್ತು ಶೇ.7.5 ಮಾತ್ರ ದಂಡ ವಿಧಿಸಲಾಗುತ್ತದೆ. ಆದ್ದರಿಂದ ಆದಾಯ ಘೋಷಣೆ ಯೋಜನೆ ಅನ್ವಯ ಸಾರ್ವಜನಿಕರು ತಮ್ಮ ಆದಾಯ ವಿವರಗಳನ್ನು ಸೆಪ್ಟೆಂಬರ್ 30ರೊಳಗೆ ಘೋಷಿಸಿ ಸಕ್ರಮಗೊಳಿಸುವಂತೆ ತಿಳಿಸಿದರು.
ಪುರಸಭಾ ಸದಸ್ಯ ಪಿ.ಕೆ ಥೋಮಸ್, ಆದಾಯ ತೆರಿಗೆ ಇಲಾಖೆಯ ಪರಿಮಳ ಅಳಗನ್, ಗೀತಾ ಕುಮಾರಿ, ಅಣ್ಣಿ ನಾಯ್ಕಿ ಉಪಸ್ಥಿತರಿದ್ದರು. ಸಿಎ ಉಮೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ರಘುಪತಿ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.