ಆತ್ರಾಡಿ ಬಳಿ ಕೆಮ್ಮಣ್ಣು ಯುವಕನ ಕೊಲೆ?

Update: 2016-07-14 15:57 GMT

ಹಿರಿಯಡ್ಕ, ಜು.14: ಆತ್ರಾಡಿ ಸಮೀಪದ ಮದಗ ಎಂಬಲ್ಲಿ ಜು.14 ರಂದು ಅಪರಾಹ್ನ 3ಗಂಟೆಗೆ ಸುಮಾರಿಗೆ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಆತನನ್ನು ಕೊಲೆ ಮಾಡಿ ತಂದು ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಕೆಮ್ಮಣ್ಣು ತಿಮ್ಮಣ್ಣ ಕುದ್ರು ನಿವಾಸಿ ಹುಸೇನ್ ಸಾಹೇಬರ ಮಗ ತಸ್ಲೀಮ್(35) ಎಂದು ಗುರುತಿಸಲಾಗಿದೆ. ಮೃತದೇಹ ದೊರೆತ ಸ್ಥಳದಲ್ಲಿ ಆತನ ಕಪ್ಪು ಬಣ್ಣದ ಫಿಗೋ ಕಾರು, ಹಾಕಿ ಸ್ಟಿಕ್, ಕೊಡೆ, ಕಪ್ಪು ಬ್ಯಾಗ್ ಪತ್ತೆ ಯಾಗಿದೆ. ಮೈಮೇಲೆ ಹೊಡೆದ ಗಾಯ ಹಾಗೂ ಬೆರಳೊಂದು ತುಂಡಾಗಿರುವುದು ಕಂಡುಬಂದಿದೆ. ಮೃತದೇಹವು ಕಾರಿನಿಂದ ಹೊರಗೆ ನೆಲದಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಈತನನ್ನು ಬೇರೆ ಕಡೆ ಹೊಡೆದು ಕೊಲೆ ಮಾಡಿ ನಿನ್ನೆ ತಡರಾತ್ರಿ ಆತನ ಕಾರಿನಲ್ಲಿ ತಂದು ಮದಗ ಹಾಡಿಯಲ್ಲಿ ಎಸೆದಿರುವ ಅಥವಾ ಅಲ್ಲೇ ಮಾತುಕತೆಗೆ ಕರೆದು ಹಾಕಿಸ್ಟಿಕ್‌ನಲ್ಲಿ ಹೊಡೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈತನ ವಿರುದ್ಧ ಸುಮಾರು 15-20ವರ್ಷಗಳ ಹಿಂದೆ ಕಳ್ಳತನ ಪ್ರಕರಣವೊಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಒಂದು ಮೂಲದ ಪ್ರಕಾರ ಈತ ಹಣದ ವ್ಯವಹಾರವೊಂದರಲ್ಲಿ ಭಾಗಿಯಾಗಿ ವಿವಾದಕ್ಕೆ ಕಾರಣವಾಗಿದ್ದ ಎನ್ನ ಲಾಗಿದೆ. ಕಳೆದ ಮಾ.18ರಂದು ಈತ ಹೂಡೆಯ ಸುಮಯ್ಯ ಎಂಬಾಕೆಯ ಜೊತೆ ಪರಾರಿಯಾಗಿ ಬೆಂಗಳೂರಿನಲ್ಲಿ ಮದುವೆಯಾಗಿ ಬಳಿಕ ಮನೆಗೆ ಹಿಂದಿರುಗಿದ್ದ. ಪ್ರಸ್ತುತ ಆತ ಪತ್ನಿ ಜೊತೆ ಸಂತೆಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ.

ಹುಸೇನ್ ಸಾಹೇಬ್ ಕೆಮ್ಮಣ್ಣುವಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಇವರಿಗೆ ಈತ ಒಬ್ಬನೆ ಮಗ. ಇನ್ನೊಬ್ಬಳು ಪುತ್ರಿ ಇದ್ದಾರೆ.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಕುಮಾರ್, ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News