×
Ad

ಕಡಲ್ಕೊರೆತ ತಡೆಗೆ 911 ಕೋ.ರೂ. ಯೋಜನೆ

Update: 2016-07-14 23:08 IST

ಉಡುಪಿ, ಜು.14: ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಕರಾವಳಿ ತೀರದಲ್ಲಿ ಕಾಣಿಸಿಕೊಳ್ಳುವ ಸಮುದ್ರಕೊರೆತವನ್ನು ವೈಜ್ಞಾನಿಕ ವಿಧಾನದಿಂದ ನಿಯಂತ್ರಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕಿನ ಆರ್ಥಿಕ ಸಹಾಯ ಮತ್ತು ಕೇಂದ್ರ ಸರಕಾರದ ತಾಂತ್ರಿಕ ಮಾರ್ಗದರ್ಶನದಲ್ಲಿ ಸುಮಾರು 911 ಕೋಟಿ ರೂ. ಮೊತ್ತದ ನಿರಂತರ ಕರಾವಳಿ ರಕ್ಷಣೆ ಮತ್ತು ನಿರ್ವಹಣೆ ಯೋಜನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ.

ವಿಧಾನಪರಿಷತ್‌ನಲ್ಲಿ ಈ ವಿಚಾರವಾಗಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪಈ ವಿಷಯ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಕೋಟ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಕಡಲಂಚಿನಲ್ಲಿ ವಾಸಿಸುವ ಮೀನುಗಾರರನ್ನೊಳಗೊಂಡಂತೆ ಸಾರ್ವಜನಿಕರ ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ ಕಡಲ್ಕೊರೆತವನ್ನು ವೈಜ್ಞಾನಿಕ ವಿಧಾನದಿಂದ ನಿಯಂತ್ರಿಸಲು ಎಡಿಬಿಯ ಆರ್ಥಿಕ ಸಹಾಯದಿಂದ ಕರಾವಳಿ ರಕ್ಷಣೆ ಮತ್ತು ನಿರ್ವಹಣೆ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ. ಈ ಯೋಜನೆಯನ್ನು 2 ಹಂತಗಳಲ್ಲಿ 8 ವರ್ಷಗಳ ಅವಧಿಯಲ್ಲಿ ಪೂರ್ಣ ಗೊಳಿಸಲಾಗುವುದು. ಮೊದಲ ಹಂತದಲ್ಲಿ 223.32 ಕೋ.ರೂ. ಮೊತ್ತದ ಉಪಯೋಜನೆಯನ್ನು ದ.ಕ. ಜಿಲ್ಲೆಯ ಉಳ್ಳಾಲದಲ್ಲಿ ಪ್ರಾರಂಭಿಸಲಾಗಿದ್ದು, 2017ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಯೋಜನೆಯ 2ನೆ ಹಂತದಲ್ಲಿ ತೀವ್ರ ಕಡಲ್ಕೊರೆತ ಉಂಟಾಗುವ ಸೋಮೇಶ್ವರ, ಎರ್ಮಾಳು ತೆಂಕ, ಉದ್ಯಾವರ, ಕೋಡಿಬೇಂಗ್ರೆ, ಕೋಡಿಕನ್ಯಾನ, ಮರವಂತೆ, ಮುರುಡೇಶ್ವರದಲ್ಲಿ ಉಪಯೋಜನೆಯನ್ನು 2019ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿದ್ದು, ಇದಕ್ಕಾಗಿ 409.50 ಕೋ.ರೂ. ಮೀಸಲಿರಿಸಲಾಗಿದೆ ಎಂದು ಡಾ.ಮಹಾದೇವಪ್ಪ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News