ಮಂಜೇಶ್ವರ: ಕೂದಲೆಳೆಯ ಅಂತರದಲ್ಲಿ ತಪ್ಪಿತು ಶಾಲಾ ಬಸ್ ದುರಂತ
Update: 2016-07-14 23:17 IST
ಮಂಜೇಶ್ವರ, ಜು.14: ಶಾಲಾ ವಿದ್ಯಾರ್ಥಿಗಳನ್ನು ಹೇರಿಕೊಂಡು ತೆರಳುತ್ತಿದ್ದ ಶಾಲಾ ಬಸ್ಸೊಂದು ತಾಂತ್ರಿಕ ದೋಷದಿಂದ ರೈಲ್ವೆ ಹಳಿಯ ಮಧ್ಯೆ ಸಿಲುಕಿಕೊಂಡ ಘಟನೆ ಹೊಸಂಗಡಿ ರೈಲ್ವೆ ಗೇಟ್‌ನಲ್ಲಿಂದು ಬೆಳಗ್ಗೆ ನಡೆದಿದೆ. ಬಳಿಕ ರೈಲು ಆಗಮಿಸುವ ಮುಂಚಿತವಾಗಿ ಊರವರು ಸೇರಿ ಬಸ್ಸನ್ನು ಹಳಿಯಿಂದ ಹೊರಗೆ ಸಾಗಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಆನೆಕಲ್ಲು ಕಡೆಯಿಂದ ಮಂಜೇಶ್ವರದ ಖಾಸಗಿ ಶಾಲೆಯೊಂದಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಸ್‌ನಲ್ಲಿ ಸುಮಾರು 60 ವಿದ್ಯಾರ್ಥಿಗಳಿದ್ದರು. ತಿರುವನಂತಪುರಂ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚರಿಸಿದ ಬಳಿಕ ರೈಲ್ವೆ ಗೇಟನ್ನು ತೆರೆದಾಗ ಸಂಚರಿಸಿದ ಬಸ್ ಹಳಿ ದಾಟುತ್ತಿದ್ದಂತೆ ತಾಂತ್ರಿಕ ದೋಷದಿಂದಾಗಿ ಮಧ್ಯೆ ಹಳಿಯಲ್ಲಿ ಸಿಲುಕಿ ಕೊಂಡಿದೆ. ಬಳಿಕ ಸ್ಥಳೀಯರು ಬಸ್ಸನ್ನು ತಳ್ಳಿ ಹಳಿಯಿಂದ ಹೊರಸಾಗಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸರಕು ಸಾಗಾಟದ ರೈಲೊಂದು ಇದೇ ಹಳಿಯಲ್ಲಿ ಸಾಗಿತು.