ಶ್ರೀಗಂಧ ಸಹಿತ ಆರೋಪಿಯ ಬಂಧನ
ಕಾಸರಗೋಡು, ಜು.14: ಭಾರೀ ಮೌಲ್ಯದ ಶ್ರೀಗಂಧದ ಕೊರಡುಗಳ ಸಹಿತ ಆರೋಪಿ ಯೊಬ್ಬನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ವಿದ್ಯಾಗಿರಿ ಮುನಿಯೂರಿನ ಪಿ.ಎಂ.ಹಮೀದ್ (43) ಬಂಧಿತ ಆರೋಪಿ. ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ 87 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.
ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಮೀದ್‌ನನ್ನು ವಿದ್ಯಾನಗರದಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ವೇಳೆ ಆತನ ಬಳಿ 11 ಕೆ.ಜಿ. ಶ್ರೀಗಂಧ ಪತ್ತೆಯಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ ತಳಿಪರಂಬ ಮಯ್ಯಿಲ್ನಿಂದ ಶ್ರೀಗಂಧವನ್ನು ತಂದಿದ್ದು, ಅದನ್ನು ಚೆಂಗಳ ಸಿಟಿಝನ್ ನಗರದ ಇಬ್ರಾಹೀಂ ಎಂಬಾತನಿಗೆ ನೀಡಲು ಕೊಂಡೊಯ್ಯುತ್ತಿದ್ದುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಅದರಂತೆ ಪೊಲೀಸರು ಇಬ್ರಾಹೀಂ ಮನೆಗೆ ದಾಳಿ ನಡೆಸಿದಾಗ ಮನೆಯಲ್ಲಿ 76 ಕೆ.ಜಿ. ಶ್ರೀಗಂಧದ ಕೊರಡುಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಇಬ್ರಾಹೀಂ ಪರಾರಿಯಾಗಿದ್ದಾರೆ. ಹಮೀದ್‌ನನ್ನು ಬಂಧಿಸಿರುವ ಪೊಲೀಸರು ಇಬ್ರಾಹೀಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.