×
Ad

ಶಿಷ್ಟಾಚಾರ ಉಲ್ಲಂಘನೆ: ಕೆರೆಬೈಲು ಅಂಗನವಾಡಿ ಉದ್ಘಾಟನೆ ಮುಂದೂಡಿಕೆ

Update: 2016-07-15 23:59 IST

ಉಳ್ಳಾಲ, ಜು.15: ಉಳ್ಳಾಲ ಕೆರೆಬೈಲಿನ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕೇಂದ್ರ ಕಟ್ಟಡವನ್ನು 7 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದ್ದು, ಶುಕ್ರವಾರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕ ಯು.ಟಿ ಖಾದರ್ ಹೆಸರನ್ನು ಕಡೆಗಣಿಸಿದ್ದು, ಶಿಷ್ಟಾಚಾರ ಉಲ್ಲಂಘನೆಯಾದ ಕಾರಣ ನಗರಸಭೆ ಅಧ್ಯಕ್ಷರ ಆದೇಶದ ಮೇರೆಗೆ ಉದ್ಘಾಟನಾ ಕಾರ್ಯಕ್ರಮವನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಉಳ್ಳಾಲ ನಗರಸಭೆ ವ್ಯಾಪ್ತಿಯ ಕೆರೆಬೈಲ್ ಅಂಗನವಾಡಿ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯು ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಎಸ್‌ಎಫ್‌ಸಿ ಯೋಜನೆಯಿಂದ 4 ಲಕ್ಷ ರೂ., ನಗರಸಭೆಯಿಂದ 1 ಲಕ್ಷ ರೂ. ಹಾಗೂ ಶೌಚಾಲಯ ನಿರ್ಮಾಣಕ್ಕೆ ಹದಿನಾಲ್ಕನೆ ಹಣಕಾಸು ಯೋಜನೆಯಡಿ 2 ಲಕ್ಷ ರೂ. ಅನುದಾನ ನೀಡಿತ್ತು. ಕಟ್ಟಡವು ನಿರ್ಮಾಣಗೊಂಡು ಬಿಜೆಪಿಯ ನಗರಸಭಾ ಸದಸ್ಯೆ ಮತ್ತು ನಗರಾಡಳಿತದ ನೇತೃತ್ವದಲ್ಲಿ ಶುಕ್ರವಾರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ಸಚಿವ ಯು.ಟಿ ಖಾದರ್‌ರ ಹೆಸರು ನಮೂದಿಸದೆ ಕಾರ್ಯಕ್ರಮಕ್ಕೂ ಅವರನ್ನು ಕರೆದಿರಲಿಲ್ಲ. ಇದನ್ನರಿತ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು ಗುರುವಾರ ರಾತ್ರಿಯೇ ಕಾರ್ಯಕ್ರಮ ನಡೆಸದಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದರು.

ಶುಕ್ರವಾರ ಬೆಳಗ್ಗೆ ಸ್ಥಳೀಯರು ನೂತನ ಅಂಗನವಾಡಿ ಕೇಂದ್ರವನ್ನು ಸಿಂಗರಿಸಿ ಉದ್ಘಾಟನೆಗೆ ಸಜ್ಜಾಗಿದ್ದರು. ಈ ಸಂದರ್ಭ ಉದ್ಘಾಟನಾ ಕಾರ್ಯಕ್ರಮ ಮುಂದೂಡಲ್ಪಟ್ಟ ವಿಚಾರ ತಿಳಿದುಬಂತು. ಶಿಷ್ಟಾಚಾರದ ಕಾರಣ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ ಎನ್ನುವುದನ್ನು ಅರಿಯದ ಕೆರೆಬೈಲು ನಾಗರಿಕರು ನಗರಸಭೆಗೆ ತೆರಳಿ ಅಂಗನವಾಡಿ ಕಟ್ಟಡ ಉದ್ಘಾಟಿಸುವಂತೆ ಅಧ್ಯಕ್ಷರು ಮತ್ತು ನಗರ ಪೌರಾಯುಕ್ತರಲ್ಲಿ ಆಕ್ರೋಶವ್ಯಕ್ತಪಡಿಸಿದ್ದು, ನಗರಸಭೆ ಆಡಳಿತವು ಸಚಿವ ಖಾದರ್ ಅವರ ಸಮಕ್ಷಮದಲ್ಲೇ ಶನಿವಾರ ಬೆಳಿಗ್ಗೆ ಅಂಗನವಾಡಿ ಕೇಂದ್ರವನ್ನು ಉದ್ಘಾಟಿ ಸುವುದಾಗಿ ಭರವಸೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News