×
Ad

ದಕ್ಷಿಣ ಚೀನಾ ಸಮುದ್ರದಲ್ಲಿ ಪರಮಾಣು ಸ್ಥಾವರ ನಿರ್ಮಿಸಲು ಚೀನಾ ಮುಂದು

Update: 2016-07-16 00:11 IST

ಬೀಜಿಂಗ್, ಜು. 15: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಚಲನಶೀಲ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಬಹುದಾಗಿದೆ ಎಂದು ಸರಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಆಯಕಟ್ಟಿನ ವಿಶಾಲ ಜಲಪ್ರದೇಶದ ಮೇಲೆ ಚೀನಾ ಏಕಸ್ವಾಮ್ಯ ಸ್ಥಾಪಿಸುವ ಹಾಗಿಲ್ಲ ಎಂಬುದಾಗಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಯೊಂದು ತೀರ್ಪು ನೀಡಿದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

 ‘‘ಸಮುದ್ರದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದರೆ, ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಚೀನಾಕ್ಕೆ ಸಹಾಯಕವಾಗುತ್ತದೆ’’ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ನ ವೆಬ್‌ಸೈಟ್ ಚೀನಾ ರಾಷ್ಟ್ರೀಯ ಪರಮಾಣು ನಿಗಮ (ಸಿಎನ್‌ಎನ್‌ಸಿ)ಯನ್ನು ಉಲ್ಲೇಖಿಸಿ ವರದಿ ಮಾಡಿದೆ. ವಿವಾದಾಸ್ಪದ ಪ್ರದೇಶದಲ್ಲಿರುವ ಸ್ಪ್ರಾಟ್ಲಿ ದ್ವೀಪ ಸಮೂಹಗಳಲ್ಲಿರುವ ದ್ವೀಪಗಳು ಮತ್ತು ಹವಳದ ದಿಬ್ಬಗಳಲ್ಲಿ ಸಿಹಿ ನೀರು ಪಡೆಯುವುದಕ್ಕಾಗಿ ಸಾಗರ ಪರಮಾಣು ವಿದ್ಯುತ್ ಸ್ಥಾವರಗಳನ್ನು ಬಳಸಲಾಗುವುದು ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿದೆ. ‘‘ಹಿಂದೆ, ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜಿಸಲ್ಪಟ್ಟಿರುವ ಸೈನಿಕರಿಗೆ ಸಿಹಿ ನೀರು ಪೂರೈಸುವ ಖಾತರಿಯಿರಲಿಲ್ಲ. ಅವರಿಗೆ ದೋಣಿಗಳಲ್ಲಿ ನೀರು ಪೂರೈಸಲಾಗುತ್ತಿತ್ತು’’ ಎಂದಿದೆ. ‘‘ಭವಿಷ್ಯದಲ್ಲಿ, ದಕ್ಷಿಣ ಚೀನಾ ಸಮುದ್ರದ ವಿದ್ಯುತ್ ಮತ್ತು ಇಂಧನ ವ್ಯವಸ್ಥೆ ಬಲಗೊಳ್ಳುತ್ತಿರುವಂತೆಯೇ, ದಕ್ಷಿಣ ಚೀನಾ ಸಮುದ್ರ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನೂ ಚೀನಾ ವೃದ್ಧಿಸುತ್ತದೆ’’ ಎಂದು ಪತ್ರಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News