ತಸ್ಲೀಮ್ ಕೊಲೆ ಪ್ರಕರಣ: ಆರೋಪಿಗಳಿಗಾಗಿ ಶೋಧ
ಹಿರಿಯಡ್ಕ, ಜು.15: ಕೆಮ್ಮಣ್ಣುವಿನ ಶೇಖ್ ಮುಹಮ್ಮದ್ ತಸ್ಲೀಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸುಮಯ್ಯ ಸಮ್ರೀನ್ ಹಿರಿಯಡ್ಕ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಆತ್ರಾಡಿಯ ಸೈಫುದ್ದೀನ್ ಹಾಗೂ ಅಕ್ರಮ್ ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸೈಫುದ್ದೀನ್ ಹಾಗೂ ಅಕ್ರಮ್‌ರ ಜೊತೆಗೆ ತಸ್ಲೀಮ್‌ಗೆ ಹಣದ ವ್ಯವಹಾರವಿದ್ದು, ಈ ವಿಚಾರವಾಗಿ ಉಂಟಾದ ವಿವಾದವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ತನಿಖೆಗಾಗಿ ಮಣಿಪಾಲ ನಿರೀಕ್ಷಕ ಗಿರೀಶ್, ಬ್ರಹ್ಮಾವರ ನಿರೀಕ್ಷಕ ಅರುಣ್‌ಕುಮಾರ್ ಹಾಗೂ ಡಿಸಿಐಬಿ ನಿರೀಕ್ಷಕರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಸೈಫುದ್ದೀನ್ ಹಾಗೂ ಅಕ್ರಮ್ ವಿದೇಶ ಅಥವಾ ಹೊರರಾಜ್ಯಕ್ಕೆ ತೆರಳಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದೆ. ತಸ್ಲೀಮ್‌ರ ಹತ್ಯೆ ಎಷ್ಟು ದಿನದ ಹಿಂದೆ ಹಾಗೂ ಯಾವ ರೀತಿ ಆಗಿದೆ ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ. ಸದ್ಯಕ್ಕೆ ಎಲ್ಲ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.
ಮುಂಬೈಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ತಸ್ಲೀಮ್ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಜು.13ರಂದು ಎಟಿಎಂನಿಂದ ಹಣ ಡ್ರಾ ಮಾಡಲೆಂದು ಮಣಿಪಾಲ ಆಸ್ಪತ್ರೆಯಿಂದ ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ಮರುದಿನ ಆತ್ರಾಡಿ ಸಮೀಪದ ಶೇಡಿಗುಡ್ಡೆಯಲ್ಲಿರುವ ಖಾಲಿ ಜಾಗದಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು.