×
Ad

ನಿರಂತರ 36 ಗಂಟೆ ಕೆಲಸಕೊಟ್ಟು ರೈಲ್ವೆ ಅಧಿಕಾರಿಗಳಿಂದ ಕಿರುಕುಳ

Update: 2016-07-16 11:15 IST

    ಚಾಲಕ್ಕುಡಿ, ಜುಲೈ 16: ನಿರಂತರ 36ಗಂಟೆಗಳ ಕಾಲ ಕೆಲಸ ನಿರ್ವಹಿಸಿದ ಪರಿಣಾಮ ಮಹಿಳಾ ಉದ್ಯೋಗಿಯೊಬ್ಬರು ಕುಸಿದು ಬಿದ್ದ ಘಟನೆ ಕೇರಳದ ಚಾಲಕ್ಕುಡಿಯಿಂದ ವರದಿಯಾಗಿದೆ. ಚಾಲಕ್ಕುಡಿ ರೈಲು ನಿಲ್ದಾಣದ ಟ್ರಾಕ್ ನಿರ್ವಹಣಾ ವಿಭಾಗದ ಜೂನಿಯರ್ ಇಂಜಿನಿಯರ್ ದಿವ್ಯಾ ಎಂಬವರು ಶುಕ್ರವಾರ ತಲೆಸುತ್ತು ಬಂದು ಕುಸಿದು ಬಿದ್ದಿದ್ದು ಅಧಿಕ ಕೆಲಸದ ಒತ್ತಡ ಇದಕ್ಕೆ ಕಾರಣವೆನ್ನಲಾಗಿದೆ. ಕಳೆದ ದಿವಸ ರಾತ್ರೆ-ಹಗಲು ಕರ್ತವ್ಯದಲ್ಲಿದ್ದ ಬಳಿಕ ಮನೆಗೆ ಹೋದ ದಿವ್ಯಾರನ್ನು ಅಧಿಕಾರಿಗಳು ಪುನಃ ಕರೆಯಿಸಿಕೊಂಡಿದ್ದರು. ಆಹಾರ ಸೇವಿಸಲು ಕೂಡಾ ಪುರುಸೊತ್ತಿಲ್ಲದೆ ಇವರು ಮರಳಿ ಬಂದಿದ್ದರು. ಕುಸಿದು ಬಿದ್ದಾಗ ದಿವ್ಯಾರನ್ನು ಆಸ್ಪತ್ರೆಗೆ ಸೇರಿಸಲು ಅಥವಾ ಪ್ರಾಥಮಿಕ ಶುಶ್ರೂಷೆ ನೀಡಲು ಇತರ ಅಧಿಕಾರಿಗಳು ಸಿದ್ಧರಾಗಲಿಲ್ಲ ಎಂಬ ಆರೋಪವಿದೆ. ಆನಂದ ಪುರ ಎಂಬಲ್ಲಿಂದ ದಿವ್ಯಾರ ತಂದೆ ಬಂದ ನಂತರ ಅವರನ್ನು ಚಾಲಕ್ಕುಡಿ ಆಸ್ಪತ್ರೆಗೆ ಸೇರಿಸಲಾಯಿತೆನ್ನಲಾಗಿದೆ. ರೈಲ್ವೆ ಅಧಿಕಾರಿಗಳ ವಿರುದ್ಧ ದಿವ್ಯಾ ಕೇಸು ಕೊಟ್ಟದ್ದರ ಪ್ರತಿಕಾರ ಈ ಘಟನೆಯ ಹಿಂದಿದೆ ಎಂದು ಹೇಳಲಾಗಿದೆ. ಒಂದೂವರೆ ವರ್ಷ ಮೊದಲು ದಿವ್ಯಾರ ಹೆರಿಗೆ ಸಂದರ್ಭದಲ್ಲಿ ದಿವ್ಯಾರಿಗೆ ಅಧಿಕಾರಿಗಳು ಮೂರು ತಿಂಗಳಿಗಿಂತ ಹೆಚ್ಚು ರಜೆ ಅನುಮತಿಸಿರಲಿಲ್ಲ. ಆದರೆ ದಿವ್ಯಾ ಒಂಬತ್ತು ತಿಂಗಳ ಚೈಲ್ಡ್ ಕೇರ್ ರಜೆಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿಗಳ ಸೂಚನಾ ಪತ್ರ ದಿವ್ಯಾರಿಗೆ ದೊರಕಿರಲಿಲ್ಲ. ಆದ್ದರಿಂದ ದಿವ್ಯಾ ರಜೆ ಮುಂದುವರಿಸಿದ್ದರು. ನಂತರ ದಿವ್ಯಾ ಕೆಲಸಕ್ಕೆ ಹಾಜರಾದಾಗ ರಜೆ ಹೆಚ್ಚಾಗಿದೆಯೆಂದು ಒಂಬತ್ತು ತಿಂಗಳ ಅನಧಿಕೃತ ರಜೆ ಎಂದು ಹೇಳಿ ಅಧಿಕಾರಿಗಳು ಸಂಬಳ ನೀಡಿರಲಿಲ್ಲ. ಇದನ್ನು ವಿರೋಧಿಸಿ ರಜೆ ಅನುಮತಿಸದ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ದಿವ್ಯಾಕೋರ್ಟ್‌ನ ಮೊರೆ ಹೋಗಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News