ಪಿಲಿಕುಳದಲ್ಲಿ ಹಲಸಿನ ಘಮ...
ಮಂಗಳೂರು, ಜು.16: ದೊಡ್ಡಬಳ್ಳಾಪುರದ ಚಂದ್ರಿಕಾ, ಶಿವರಾತ್ರಿ, ರುದ್ರಾಳಿ, ತುಮಕೂರಿನ ಚಂದ್ರಹಲಸು, ದಕ್ಷಿಣ ಕನ್ನಡ ಜಿಲ್ಲೆಯ ಬರ್ಕೆ ಹಾಗೂ ತುಳುವ, ಹಲಸಿನ ಹಣ್ಣುಗಳ ಪರಿಮಳ ಒಂದೆಡೆಯಾದರೆ, ಬೀಜದ ಬರ್ಫಿ, ಹಲಸಿನ ಹಣ್ಣಿನ ಹಲ್ವ, ಕೇಸರಿ ಬಾತು, ಹಪ್ಪಳ, ಸೆಂಡಿಗೆ, ಚಟ್ನಿ ಪುಡಿ, ಹಲಸಿನ ಕಾಯಿಯ ತವಾ ಫ್ರೈ.....ಹೀಗೆ ಹಲಸಿನ ಹಣ್ಣು, ಕಾಯಿ ಹಾಗೂ ಬೀಜದ ನಾನಾ ರೀತಿಯ ಉತ್ಪನ್ನಗಳು. ಇವು ಇಂದು ನಗರದ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನಲ್ಲಿ ಉದ್ಘಾಟನೆಗೊಂಡ ‘ಹಲಸಿನ ಮೇಳ’ದಲ್ಲಿ ಕಂಡು ಬಂದ ದೃಶ್ಯ.
ದ.ಕ. ಜಿಲ್ಲೆಯಲ್ಲಿ ಹಲಸು ಯಥೇಚ್ಛವಾಗಿ ಬೆಳೆಯುತ್ತಿದ್ದರೂ ಕಾಡು ಹಣ್ಣಾಗಿ, ವ್ಯರ್ಥವಾಗುತ್ತಿರುವುದೇ ಅಧಿಕ. ಆದರೆ ಮೇಳದ ಮೂಲಕ ಹಲಸಿನ ಉತ್ಪನ್ನಗಳ ವೈವಿಧ್ಯತೆಯನ್ನು, ಅದರ ಔಷಧೀಯ ಗುಣವನ್ನು ಸಾರ್ವಜನಿಕರಿಗೆ ಪ್ರಯತ್ನಿಸುವ ಪ್ರಯತ್ನವೂ ನಡೆದಿದೆ. ಹಲಸಿನ ಹಣ್ಣು ಮತ್ತು ಉತ್ಪನ್ನಗಳ ಜತೆಗೆ ಹಲಸಿನ ವಿವಿಧ ತಳಿಗಳ ಸಸಿಗಳ ಮಾರಾಟವನ್ನೂ ಆಯೋಜಿಸಲಾಗಿದೆ. ತುಮಕೂರು, ದೊಡ್ಡಬಳ್ಳಾಪುರದಿಂದ ರೈತರು ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದು, ಇಡೀ ಹಣ್ಣಿಗಿಂತಲೂ ಮುಖ್ಯವಾಗಿ ಹಣ್ಣುಗಳ ಸೊಳೆಯನ್ನು ಖರೀದಿಸುತ್ತಿರುವುದು ಕಂಡು ಬಂತು. ‘‘ಮಂಗಳೂರಿನಲ್ಲಿ ಹಲಸಿನ ಹಣ್ಣಿಗೆ ಭಾರೀ ಬೇಡಿಕೆ ಇರುವುದು ಇತ್ತೀಚೆಗೆ ನಗರದಲ್ಲಿ ನಡೆದ ಕೆಲವೊಂದು ಮೇಳಗಳಿಂದ ವ್ಯಕ್ತವಾಗಿದೆ. ಆದರೆ ಹಲಸಿನ ಹಣ್ಣನ್ನು ತುಂಡು ಮಾಡುವುದು, ಅದರ ಮೇಣದ ಸಮಸ್ಯೆಯಿಂದಾಗಿ ಈ ಹಣ್ಣನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಬೇರ್ಪಡಿಸಿದ ಹಲಸಿನ ಸೊಳೆ ಹಾಗೂ ಹಲಸಿನ ನಾನಾ ರೀತಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ’’ ಎನ್ನುತ್ತಾರೆ ತುಮಕೂರಿನ ರೈತ ಮುರಳೀಧರ್.
ತಾಯಿ ಜತೆ ಎಂಕಾಂ ವಿದ್ಯಾರ್ಥಿಯ ಹಲಸಿನ ಖಾದ್ಯ ವೈವಿಧ್ಯ!
ಮೇಳದಲ್ಲಿ ಎಂಕಾಂ ವಿದ್ಯಾರ್ಥಿಯೊಬ್ಬ ತನ್ನ ತಾಯಿ ಜತೆ ತಯಾರಿಸಿದ ಹಲಸಿನ ವಿವಿಧ ಖಾದ್ಯಗಳ ಮೂಲಕ ಗಮನ ಸೆಳೆಯುತ್ತಾನೆ. ಪುತ್ತೂರಿನ ನಿವಾಸಿಯಾಗಿರುವ ಸುಹಾಸ್, ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಎಂಕಾಂ ವಿದ್ಯಾರ್ಥಿ. ತಮ್ಮ ಮನೆಯಲ್ಲಿ ಬೆಳೆದ ಹಲಸನ್ನು ಉಪಯೋಗಿಸಿ ಸುಹಾಸ್ ಹಾಗೂ ಅವರ ತಾಯಿ ಹಲಸಿನ ಬೀಜದ ಬರ್ಫಿ, ಲಡ್ಡು, ಹಲಸಿನ ಪಲಾವ್, ಹಲಸಿನ ಮಸಾಲ್ ದೋಸೆ, ಕೇಸರಿಬಾತ್ ಹಾಗೂ ಸೇವ್ ಪೂರಿ ಮೊದಲಾದ ವೈವಿಧ್ಯಮಯ ತಿನಿಸುಗಳನ್ನು ತಯಾರಿಸಿದ್ದು, ಮೇಳಕ್ಕೆ ಆಗಮಿಸಿದ ಗ್ರಾಹಕರು ಬಾಯಿ ಚಪ್ಪರಿಸಿ ಈ ಖಾದ್ಯಗಳ ರುಚಿ ಸವಿಯುತ್ತಿರುವುದು ಕಂಡು ಬಂತು. ‘‘ನಾನು ಬಿಡುವಿನ ವೇಳೆಯಲ್ಲಿ ಅಮ್ಮನ ಜತೆ ಈ ರೀತಿಯ ಖಾದ್ಯಗಳ ಪ್ರಯೋಗ ಮಾಡುತ್ತಿರುತ್ತೇನೆ. ಹಲಸಿನ ಹಣ್ಣುಗಳಿಂದ ಏನೆಲ್ಲಾ ವೈವಿಧ್ಯ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಹೊರಗಿನಿಂದಲೂ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ನಾನು ವಿದ್ಯಾರ್ಥಿಯಾಗಿರುವ ಕಾರಣ, ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ’’ ಎನ್ನುತ್ತಾರೆ ಸುಹಾಸ್.
ಹೀಪನಳ್ಳಿಯ ಚೈತ್ಯ ಸ್ತ್ರೀ ಶಕ್ತಿ ಸಂಘದ ಹಲಸಿನ ಬೀಜದ ಚಿಪ್ಸ್, ಮಲೆನಾಡಿನ ವಿಶೇಷ ತಿನಿಸಾಗಿರುವ ತೊಡೆದೇವು ಕೂಡಾ ಪ್ರದರ್ಶನದಲ್ಲಿತ್ತು. ಮೇಳದಲ್ಲಿ ಹಲಸಿನ ಹಣ್ಣಿನ ಐಸ್‌ಕ್ರೀಂ ಹಾಗೂ ಹಲಸಿನ ಬೀಜದ ಜಾಫೀ ವಿಶೇಷ ಆಕರ್ಷಣೆಯಾಗಿದೆ.‘‘ನಾನು ಪ್ರತಿ ವರ್ಷ ಊರವರಿಂದ ಹಲಸನ್ನು ಖರೀದಿಸಿ ಮಾರಾಟ ಮಾಡುತ್ತೇನೆ. ಇಂದು ಪಿಲಿಕುಳಕ್ಕೆ ಸುಮಾರು 75 ಹಣ್ಣುಗಳನ್ನು ತಂದಿದ್ದೇನೆ. ಸುಮಾರು ಎರಡು ಗಂಟೆ ಅವಧಿಯಲ್ಲೇ 15ರಷ್ಟು ಹಣ್ಣುಗಳು ಮಾರಾಟವಾಗಿದೆ’’ ಎಂದು ವಾಮಂಜೂರು ನಿವಾಸಿ, ವ್ಯಾಪಾರಿ ಉಸ್ಮಾನ್ ಅಭಿಪ್ರಾಯಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಸುಮಾರು 60ರಷ್ಟು ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಡವರ ಊಟವಿಂದು ಶ್ರೀಮಂತರ ಪಥ್ಯ: ಪ್ರೊ. ಬೈರಪ್ಪ
ಒಂದು ಕಾಲದಲ್ಲಿ ಬಡವರ ಊಟವೆಂದೇ ಪರಿಗಣಿಸಲಾಗಿದ್ದ, ಕಾಡು ಬೆಳೆಯಾಗಿ ಮೂಲೆಗುಂಪಾಗಿದ್ದ ಹಲಸಿಗೂ ಇಂದು ಪ್ರಾಧಾನ್ಯತೆ ದೊರಕಿದ್ದು, ಇದೀಗ ಹಲಸು ಶ್ರೀಮಂತರ ಆಹಾರ ಪಥ್ಯವಾಗಿ ರೂಪುಗೊಂಡಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಭೈರಪ್ಪ ಹೇಳಿದರು. ರುದ್ರಾಕ್ಷಿ ಹಲಸನ್ನು ಕತ್ತರಿಸುವ ಮೂಲಕ ಹಲಸಿನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಲವಾರು ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬೇಕಾದ ಔಷಧೀಯ ಗುಣಗಳು ಹಲಸಿನಲ್ಲಿರುವುದು ಸಂಶೋಧನೆಗಳಿಂದ ವ್ಯಕ್ತವಾಗಿರುವುದರಿಂದ ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಹಾಗೂ ಯಥೇಚ್ಚವಾಗಿರುವ ಈ ಹಣ್ಣಿನ ರಫ್ತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದ್ದು, ಇದಕ್ಕಾಗಿ ಹಲಸಿನ ಪ್ರತ್ಯೇಕ ನಿಗಮ ಸ್ಥಾಪನೆಯಾಗುವುದು ಸೂಕ್ತ ಎಂದು ಪ್ರೊ. ಬೈರಪ್ಪ ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಲತಜ್ಞ ಡಾ. ಶ್ರೀಪಡ್ರೆ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶಿವಕುಮಾರ್ ಮಗದ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು.