ಕೊಳಚೆನೀರು ಶುದ್ಧೀಕರಣ ಘಟಕಕ್ಕೆ 34 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಯೋಜನೆ: ಶಾಸಕ ಸೊರಕೆ
ಪಡುಬಿದ್ರೆ, ಜು.16: ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಬಳಿ ನಿರ್ಮಿಸಲುದ್ದೇಶಿಸಿರುವ ಕೊಳಚೆನೀರು ಶುದ್ಧೀಕರಣ ಘಟಕಕ್ಕೆ 34 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಯೋಜನೆಗೆ ಅಂದಾಜುಪಟ್ಟಿ ತಯಾರಿಸಿ ನಗರ ನೀರು ಸರಬರಾಜು ಮಂಡಳಿಯಿಂದ ಅನುಮೋದನೆ ಪಡೆಯಲಾಗಿದ್ದು ಟೆಂಡರ್ ಅವಕಾಶ ಬಾಕಿ ಇದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಪುರಸಭಾಧ್ಯಕ್ಷೆ ಸೌಮ್ಯಾರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಒಳಚರಂಡಿ ಮಂಡಳಿ ಅಧಿಕಾರಿಯನ್ನು ಮುಂದಿನ ಸಾಮಾನ್ಯ ಸಭೆಗೆ ಕರೆದು ಪುರಸಭಾ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುವುದು. ಸದಸ್ಯರಿಗೆ ಮನವರಿಕೆಯಾದ ಬಳಿಕ ಸಾರ್ವಜನಿಕ ಸಭೆ ಕರೆದು ಜನರಿಗೆ ಮನವರಿಕೆ ಮಾಡಿ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.
ಕಾಪು ಪೇಟೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಸಮಗ್ರ ಮಾಹಿತಿ ನೀಡುವಂತೆ ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಶಾಸಕರು, ಈಗ ನಡೆಯುತ್ತಿರುವುದು ಹಿಂದೆ ಮಂಜೂರಾಗಿದ್ದ 3 ಕೋಟಿ ರೂ. ಅನುದಾನದ ತಾತ್ಕಾಲಿಕ ಕಾಮಗಾರಿಯಾಗಿದೆ. ಸುಬ್ಬಯ್ಯ ತೋಟ ಪ್ರದೇಶಕ್ಕೆ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದಿರುವ ಬಗ್ಗೆ ಸದಸ್ಯ ಅನಿಲ್ ಪೂಜಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಲಕ್ಷ್ಮೀನಗರ, ರಾಮನಗರ ವ್ಯಾಪ್ತಿಗೂ ನೀರು ಸರಬರಾಜಾಗುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಪುರಸಭಾ ಇಂಜಿನಿಯರ್ ಹೊಸ ಪೈಪು ಅಳವಡಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದರು. ಅವರ ಉತ್ತರಕ್ಕೆ ತೃಪ್ತರಾಗದ ಅನಿಲ್ ಈಗ ಅಳವಡಿಸಿರುವ ಪೈಪ್‌ನಿಂದ ಸರಾಗವಾಗಿ ನೀರು ಸರಬರಾಜು ಆಗುತ್ತಿಲ್ಲ. ತಕ್ಷಣ ಈ ಹಿಂದೆ ಇದ್ದಂತಹ ಪೈಪ್ ಅಳವಡಿಸಿ ನೀರು ಪೂರೈಸುವಂತೆ ಒತ್ತಾಯಿಸಿದರು. ಮಾಡಿದ ಕಾಮಗಾರಿಯ ಬಿಲ್ ಪಾವತಿಯನ್ನು ತಡೆಹಿಡಿಯಬೇಕೆಂದು ಕೋರಿದರು. ಎಲ್ಲಾ ವಾರ್ಡ್‌ಗಳಲ್ಲಿಯೂ ಬೀದಿ ದೀಪಗಳು ಸಮರ್ಪಕವಾಗಿಲ್ಲ. ವಿದ್ಯುತ್ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು.
ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ವಾರದ ಮೂರು ದಿನಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆ. ಪ್ರತಿ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುವಾಗ ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತರುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಮುಖ್ಯಾಧಿಕಾರಿ ಮೆಬೆಲ್ ಡಿಸೋಜ ಇದ್ದರು.