ಬ್ಯಾರಿ ಗೈಸ್ ವತಿಯಿಂದ ಪುಚ್ಚೆಮೊಗರಿನಲ್ಲಿ ಮನೆ ನಿರ್ಮಾಣ: ಶಿಲಾನ್ಯಾಸ
ಮೂಡುಬಿದಿರೆ, ಜು.16: ಬಡವರಿಗೆ ಮಾಡುವ ಸೇವೆ ಅತ್ಯಂತ ಪುಣ್ಯದ ಕೆಲಸ. ವ್ಯಕ್ತಿ ತನ್ನ ಒಳಿತಿನ ಬಗ್ಗೆ ಮಾತ್ರ ಚಿಂತಿಸದೆ ಇತತರ ಬಗ್ಗೆ ದಯೆ, ಅನುಕಂಪ ಹಾಗೂ ಪರೋಕಾರಿ ಗುಣವನ್ನು ಹೊಂದಿರಬೇಕು. ಸಕಲ ಜೀವರಾಶಿಗಳಿಗೆ ಆತ ಬೇಕಾದವನಾದರೆ ಅಲ್ಲಾಹನ ಅನುಗ್ರಹವನ್ನು ಪಡೆಯುತ್ತಾನೆ ಎಂದು ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಹೇಳಿದ್ದಾರೆ.
ಬ್ಯಾರಿ ಗೈಸ್ ವತಿಯಿಂದ ಪುಚ್ಚೆಮೊಗರಿನಲ್ಲಿ ಅಬ್ದುಲ್ ಹಮೀದ್ ಅವರಿಗೆ ನಿರ್ಮಿಸಲಾಗುವ ಮನೆಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಅಲ್ ಹಾಫಿಳ್ ಯಾಕೂಬ್ ಸಅದಿ ನಾವೂರು ಮಾತನಾಡಿ, ಮಾನವೀಯತೆಯಿದ್ದವರಲ್ಲಿ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ. ಮಾನವೀಯತೆ ಇಲ್ಲದಿದ್ದರೆ ಪರಸ್ಪರ ಸಂಬಂಧಗಳು ದೂರವಾಗಿ ಅಶಾಂತಿಗೆ ಕಾರಣವಾಗಬಲ್ಲದು ಎಂದು ಹೇಳಿದ ಅವರು, ಬಡವರಿಗೆ ಮನೆಕಟ್ಟಿಕೊಡುವ ಬ್ಯಾರಿಗೈಸ್ ಕಾರ್ಯವನ್ನು ಶ್ಲಾಘಿಸಿದರು.
ಮನೆ ನಿರ್ಮಾಣಕ್ಕೆ ಹುಸೇನ್ ಕೃಷ್ಣಾಪುರ 4 ಲಕ್ಷ, ನಸ್ರುತುಲ್ ಇಸ್ಲಾಂ ಯಂಗ್‌ಮೆನ್ಸ್ ಪುಚ್ಚೆಮೊಗರು 1 ಲಕ್ಷ, ಶರೀಫ್ ಉಳಾಯಿಬೆಟ್ಟು ಹಾಗೂ ಅಬ್ಬಾಸ್ ಕುಟುಂಬ ತಲಾ 50 ಸಾವಿರ ಆರ್ಥಿಕ ಸಹಾಯ ನೀಡಿದರು.
ಹುಸೈನ್ ಕೃಷ್ಣಾಪುರ, ಅನ್ಸಾರ್ ಅಡ್ಮಿನ್ ಬ್ಯಾರಿ ಗೈಸ್, ಝಿಯಾಝ್ ವಿಟ್ಲ, ವಕೀಲರಾದ ಇಲ್ಯಾಸ್, ಹಸನಬ್ಬ ಪುಚ್ಚೆಮೊಗರು, ಖತೀಬರಾದ ಇಬ್ರಾಹೀಂ ಮದನಿ, ಇಬ್ರಾಹೀಂ ಸಅದಿ, ಗ್ರಾಪಂ ಸದಸ್ಯ ಯೋಗೀಶ್ ಶೆಟ್ಟಿ, ರಾಝೀಕ್ ಬಜ್ಪೆ, ಫಾರೂಕ್ ಮೂಡುಬಿದಿರೆ, ಲತೀಫ್ ಮತ್ತಿತರರು ಉಪಸ್ಥಿತರಿದ್ದರು.
ಇಬ್ರಾಹೀಂ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾರಿಗೈಸ್ ವತಿಯಿಂದ ಪುಚ್ಚೆಮೊಗರು ಸಹಿತ ಜಿಲ್ಲೆಯ ನಾಲ್ಕು ಕಡೆ ಫಲಾನುಭವಿಗಳನ್ನು ಗುರುತಿಸಿ ಮನೆ ಕಟ್ಟಿಕೊಡಲಾಗುವುದು ಎಂದರು. ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.