×
Ad

ಪಿಲಾರು: ಎರಡು ಮನೆಗಳಿಂದ ನಗ-ನಗದು ದೋಚಿದ ಕಳ್ಳರು

Update: 2016-07-16 18:28 IST

ಉಳ್ಳಾಲ, ಜು.16: ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು, ದಾರಂದ ಬಾಗಿಲು ಎಂಬಲ್ಲಿಯ ಎರಡು ಮನೆಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗ, ನಗದು, ಎಟಿಎಂ ಕಾರ್ಡ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಿಲಾರು ದಾರಂದ ಬಾಗಿಲಿನ ಎರಡು ಮನೆಗಳಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳರು ಎರಡು ಮನೆಗಳ ಬಾಗಿಲು ಮುರಿದು ಒಳನುಗ್ಗಿ ನಗ, ನಗದು ದೋಚಿ ಪರಾರಿಯಾಗಿದ್ದಾರೆ.

ದಾರಂದ ಬಾಗಿಲಿನ ಶೇಖ್ ಬಾಬ್‌ಜಾನ್ ಎಂಬವರ ಮನೆಯ ಮುಖ್ಯದ್ವಾರದ ಬೀಗ ಒಡೆದು ಒಳನುಗ್ಗಿದ ಕಳ್ಳರು ಮೂರು ಕೋಣೆಗಳ ಕಬಾಟಿನಲ್ಲಿದ್ದ 4ಗ್ರಾಂನ ಬ್ರೇಸ್‌ಲೆಟ್, 2ಗ್ರಾಂನ ಕಿವಿ ಓಲೆ,31ಗ್ರಾಂನ ಸರ ಸೇರಿ ಒಟ್ಟು ಒಂದು ಲಕ್ಷಕ್ಕೂ ಅಧಿಕ ಬೆಳೆಬಾಳುವ 37 ಗ್ರಾಂ ಚಿನ್ನ ಮತ್ತು ಒಂದು ಎಟಿಎಂ ಕಾರ್ಡನ್ನು ದೋಚಿ ಪರಾರಿಯಾಗಿದ್ದಾರೆ. ಬಾಬ್‌ಜಾನ್ ಅವರು ವಿದೇಶದಲ್ಲಿ ನೆಲೆಸಿದ್ದು ಮನೆಯಲ್ಲಿ ಅವರ ಪತ್ನಿ ಖುರ್ಷಿದಾ ಮತ್ತು ಮಗ ಶೇಖ್ ಶಾಹಿರ್ ವಾಸವಿದ್ದು ಶುಕ್ರವಾರ ಸಂಜೆ ಖುರ್ಷಿದಾ ಅವರು ಮಗನೊಂದಿಗೆ ಬಜ್ಪೆಯಲ್ಲಿರುವ ಅಳಿಯನ ಮನೆಗೆ ತೆರಳಿದ್ದರು. ಶನಿವಾರ ಬೆಳಿಗ್ಗೆ ಮಗ ಶಾಹಿರ್ ಮನೆಗೆ ಬಂದಾಗ ಬಾಗಿಲನ್ನು ಒಡೆದು ಕಳ್ಳತನ ನಡೆದ ವಿಷಯ ಬೆಳಕಿಗೆ ಬಂದಿದೆ.

ಬಾಬುಜಾನ್ ಅವರ ಮನೆಯಿಂದ ಕೂಗಳತೆಯ ಅಂತರದಲ್ಲಿರುವ ರಮಣಿ ಶೆಟ್ಟಿ ಎಂಬವರ ಹಳೆಯ ಹಂಚಿನ ಮನೆಯ ಬಾಗಿಲನ್ನೂ ಒಡೆದ ಕಳ್ಳರು ಮನೆಯೊಳಗಿದ್ದ ಕಬಾಟಿನ ಬಾಗಿಲು ಮುರಿದು ರಮಣಿಯವರ ಮೊಮ್ಮಗುವಿನ ಕಾಲಿನ ಬೆಳ್ಳಿ ಗೆಜ್ಜೆ, ಸೊಂಟದ ಬೆಳ್ಳಿ ಸರ ಮತ್ತು ಚಿನ್ನದ ಉಂಗುರವನ್ನು ದೋಚಿದ್ದಾರೆ. ರಮಣಿಯವರು ಶುಕ್ರವಾರ ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿ ಹತ್ತಿರದ ಸಂಬಂಧಿ ಮನೆಯಲ್ಲಿ ತಂಗಿದ್ದ ವೇಳೆ ಕಳ್ಳರು ಮನೆಗೆ ಕನ್ನ ಹಾಕಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ಅಪರಾಧ ವಿಬಾಗದ ಎಸೈ ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ.

ಕಳೆದ ವಾರವಷ್ಟೇ ಕೋಟೆಕಾರು ಸ್ಟೆಲ್ಲಾ ಮೆರೀಸ್ ಮತ್ತು ಕೊಲ್ಯದ ಜಾಯ್‌ಲ್ಯಾಂಡ್ ಶಾಲೆಗಳಲ್ಲಿ ಕಳ್ಳತನ ನಡೆದಿದ್ದು,ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News