9/11: ಸೌದಿ ‘ನಂಟಿನ’ 28 ಪುಟಗಳ ವರದಿ ಬಹಿರಂಗ
ವಾಶಿಂಗ್ಟನ್, ಜು. 16: ಸೆಪ್ಟಂಬರ್ 2011ರ ದಾಳಿಯನ್ನು ನಡೆಸಿದ ಭಯೋತ್ಪಾದಕರು ಮತ್ತು ಸೌದಿ ಅರೇಬಿಯದ ನಡುವೆ ಸಂಪರ್ಕ ಇತ್ತೆಂದು ಹೇಳುತ್ತದೆಯೆನ್ನಲಾದ, ತುಂಬಾ ಸಮಯ ಗುಪ್ತವಾಗಿರಿಸಲಾಗಿದ್ದ ದಾಖಲೆಯನ್ನು ಅಮೆರಿಕದ ಕಾಂಗ್ರೆಸ್‌ನ ಹೌಸ್ ಇಂಟಲಿಜನ್ಸ್ ಕಮಿಟಿ ಶುಕ್ರವಾರ ಬಹಿರಂಗಪಡಿಸಿದೆ.
ಅಮೆರಿಕದ ಗುಪ್ತಚರ ಇಲಾಖೆ ನಡೆಸಿದ ಪರಿಶೀಲನೆಯ ಬಳಿಕ ದಾಖಲೆಯನ್ನು ಬಹಿರಂಗಪಡಿಸಲಾಗಿದೆ.
ದಾಖಲೆಯನ್ನು ಬಹಿರಂಗಪಡಿಸಬೇಕೇ, ಬೇಡವೇ ಎಂಬ ಬಗ್ಗೆ ಕಾನೂನು ಸಮರ ನಡೆದ ಒಂದು ವರ್ಷದುದ್ದಕ್ಕೂ ಅದನ್ನು ‘‘28 ಪುಟಗಳು’’ ಎಂಬುದಾಗಿ ಕರೆಯಲಾಗಿತ್ತು. ಅಲ್-ಖಾಯಿದ ನಡೆಸಿದ 9/11ರ ದಾಳಿ ಬಗ್ಗೆ ಸೆನೆಟ್ ಮತ್ತು ಹೌಸ್ ಇಂಟಲಿಜನ್ಸ್ ಕಮಿಟಿ 2002ರಲ್ಲಿ ನಡೆಸಿದ ಜಂಟಿ ತನಿಖೆಯ ಭಾಗ ಇದಾಗಿದೆ.
ಸಂತ್ರಸ್ತ ಕುಟುಂಬಗಳು ಮತ್ತು ಕೆಲವು ಸಂಸದರು ಗುಪ್ತ ದಾಖಲೆಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದರು. ದಾಳಿಯಲ್ಲಿ ಇದ್ದಿರಬಹುದಾದ ಸಂಭಾವ್ಯ ಸೌದಿ ನಂಟನ್ನು ಮರೆಮಾಚಲು ಸರಕಾರ ಯತ್ನಿಸುತ್ತಿದೆ ಎನ್ನುವುದು ಅವರ ಆರೋಪ.
9/11ರ ದಾಳಿಯಲ್ಲಿ ಪಾಲ್ಗೊಂಡ 19 ವಿಮಾನ ಅಪಹರಣಕಾರರ ಪೈಕಿ 15 ಮಂದಿ ಸೌದಿ ರಾಷ್ಟ್ರೀಯರಾಗಿದ್ದರು.
ಶುಕ್ರವಾರ ಬಿಡುಗಡೆಗೊಳಿಸಲಾದ ದಾಖಲೆಗಳಲ್ಲಿ ಹೆಸರಿಸಲಾದ ಎಲ್ಲ ಸೌದಿ ರಾಷ್ಟ್ರೀಯರನ್ನು ಎಫ್‌ಬಿಐ ಮತ್ತು ಸಿಐಎ ತನಿಖೆಗೊಳಪಡಿಸಿದೆ ಹಾಗೂ ಅದರ ವಿವರಗಳನ್ನು ನಂತರದ ವರದಿಗಳಲ್ಲಿ ನೀಡಲಾಗಿದೆ.
ದಾಳಿಗಳ ಬಗ್ಗೆ ಅತ್ಯಂತ ವಿವರವಾಗಿ ತನಿಖೆ ನಡೆಸಿರುವ 9/11 ಕಮಿಶನ್, ಸೌದಿ ಸರಕಾರ ಒಂದು ಸಂಸ್ಥೆಯಾಗಿ ಅಥವಾ ಅದರ ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಅಲ್-ಖಾಯಿದಕ್ಕೆ ನಿಧಿ ಪೂರೈಸಿರುವುದಕ್ಕೆ ಪುರಾವೆಯಿಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಪುರಾವೆಯಿಲ್ಲ: ಶ್ವೇತಭವನ
ಅಮೆರಿಕದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಅಧಿಕೃತ ವರದಿಯ 28 ಗುಪ್ತ ಪುಟಗಳ ಪರಿಶೀಲನೆಯನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ಪೂರ್ತಿಗೊಳಿಸಿದ್ದಾರೆ ಹಾಗೂ ಇವುಗಳಲ್ಲಿ ದಾಳಿಯಲ್ಲಿ ಸೌದಿ ಶಾಮೀಲಾತಿಯ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಶ್ವೇತಭವನದ ವಕ್ತಾರ ಜೋಶ್ ಅರ್ನೆಸ್ಟ್ ಶುಕ್ರವಾರ ತಿಳಿಸಿದರು.
‘‘ನಾವು ಕೆಲವು ಸಮಯದಿಂದೀಚೆಗೆ ಏನನ್ನು ಹೇಳುತ್ತಾ ಬಂದಿದ್ದೇವೋ ಅದನ್ನು ಈ ವರದಿಯು ಖಚಿತಪಡಿಸುತ್ತದೆ’’ ಎಂದು ವರದಿಯನ್ನು ಕಾಂಗ್ರೆಸ್‌ಗೆ ಕಳುಹಿಸುವ ಮುನ್ನ ಶ್ವೇತಭವನದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
‘‘2001 ಸೆಪ್ಟಂಬರ್ 11ರ ದಾಳಿಯಲ್ಲಿ ಸೌದಿ ಅರೇಬಿಯ ಶಾಮೀಲಾಗಿದೆ ಎನ್ನುವುದನ್ನು ಸೂಚಿಸುವ ಯಾವುದೇ ಹೊಸ ಪುರಾವೆ 28 ಪುಟಗಳ ದಾಖಲೆಯಲ್ಲಿ ಇಲ್ಲ’’ ಎಂದು ಅರ್ನೆಸ್ಟ್ ಹೇಳಿದರು.
ಅದೇ ವೇಳೆ, ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಅಮೆರಿಕಕ್ಕೆ ಸೌದಿ ಅರೇಬಿಯದ ರಾಯಭಾರಿ ಅಬ್ದುಲ್ಲಾ ಅಲ್-ಸೌದ್, ‘‘ಸೌದಿ ಅರೇಬಿಯದ ಕೃತ್ಯಗಳು, ಉದ್ದೇಶಗಳ ಬಗೆಗಿನ ಪ್ರಶ್ನೆಗಳು ಮತ್ತು ಸಂಶಯಗಳನ್ನು ಈ ದಾಖಲೆಗಳು ಶಾಶ್ವತವಾಗಿ ನಿವಾರಿಸುತ್ತವೆ ಎಂದು ನಾವು ಭಾವಿಸುತ್ತೇವೆ’’ ಎಂದು ಹೇಳಿದ್ದಾರೆ.