×
Ad

ತೊಕ್ಕೊಟ್ಟು: ಪಾನಮತ್ತ ಯುವಕರ ಹೊಡೆದಾಟ, ಕಲ್ಲೆಸೆತದಿಂದ ಬಾಲಕಿಗೆ ಗಾಯ

Update: 2016-07-16 19:01 IST

ಉಳ್ಳಾಲ, ಜು.16: ವೈನ್‌ಶಾಪ್ ಒಂದರ ಎದುರಲ್ಲೇ ಯುವಕರಿಬ್ಬರು ಕಂಠಪೂರ್ತಿ ಕುಡಿದು ಪರಸ್ಪರ ಹೊಡೆದಾಟ ನಡೆಸಿದ್ದು, ಈ ಸಂದರ್ಭ ಇಬ್ಬರಲ್ಲಿ ಓರ್ವ ಓಡಲೆತ್ನಿಸಿದಾಗ ಇನ್ನೋರ್ವ ಎಸೆದ ಕಲ್ಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆರರ ಬಾಲಕಿಗೆ ತಾಗಿ ಗಾಯಗೊಂಡ ಘಟನೆ ತೊಕ್ಕೊಟ್ಟಿನಲ್ಲಿ ಸಂಭವಿಸಿದೆ. ಈ ಸಂದಭರ್ ಆಕ್ರೋಶಗೊಂಡ ನಾಗರಿಕರು ಪಾನಮತ್ತ ಯುವಕರಿಬ್ಬರಿಗೂ ಥಳಿಸಿದ್ದಾರೆ.

ಕೊಣಾಜೆ ಮಲಾರಿನ ಐಫಾ (6)ಎಂಬಾಕೆಯೇ ಗಾಯಗೊಂಡ ಬಾಲಕಿ.

ಶನಿವಾರ ಸಂಜೆ ನಾಲ್ಕು ಗಂಟೆ ವೇಳೆಗೆ ತೊಕ್ಕೊಟ್ಟಿನ ಪ್ರಶಾಂತ್ ವೈನ್ಸ್‌ನಲ್ಲಿ ಕಂಠಪೂರ್ತಿ ಕುಡಿದಿದ್ದ ಕೇರಳ ಮಲಯಾಳಿ ಭಾಷಿಗ ಯುವಕರಿಬ್ಬರು ವೈನ್ಸ್ ಹೊರಗಡೆ ಬಂದು ಸಾರ್ವಜನಿಕರು ಹಾದುಹೋಗುವ ರಸ್ತೆಯಲ್ಲೇ ಪರಸ್ಪರ ಹೊಡೆದಾಟ ಆರಂಭಿಸಿದ್ದರು. ಈ ಸಂದರ್ಭ ಓರ್ವ ಓಡಲೆತ್ನಿಸಿದಾಗ ಇನ್ನೋರ್ವ ಅವನ ಕಡೆ ಬಲವಾಗಿ ಕಲ್ಲೆಸೆದಿದ್ದಾನೆ. ಇದೇ ವೇಳೆಗೆ ವೈನ್ಸ್ ಎದುರುಗಡೆಯಿಂದ ಅಜ್ಜಿ ಮತ್ತು ತಾಯಿ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಐಫಾಳ ಕಾಲಿಗೆ ಬಲವಾಗಿ ಏಟು ಬಿದ್ದಿತ್ತು.

ಘಟನೆಯಿಂದ ಆಕ್ರೋಶಗೊಂಡ ನಾಗರಿಕರು ಇಬ್ಬರು ಕುಡುಕರಿಗೂ ಥಳಿಸಿದ್ದು, ಓರ್ವ ಪಲಾಯನಗೈದಿದ್ದಾನೆ. ಇನ್ನೋರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿಸಲಾಗಿದೆ. ಸಾರ್ವಜನಿಕರ ಏಟಿಗೆ ಗಾಯಗೊಂಡಿರುವ ಕುಡುಕನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

ಸಂಪೂರ್ಣ ನಶೆಯಲ್ಲಿರುವ ಆತನನ್ನು ವಿಚಾರಿಸಿದಾಗ ತಾನು ಕೇರಳ ಗಡಿಭಾಗದ ಸುಳ್ಯ ನಿವಾಸಿ ನವಾಝ್ ಎಂದು ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News