×
Ad

ಯಾರದೋ ಸಮಾಧಾನಕ್ಕಾಗಿ ಸಚಿವರನ್ನು ಬಲಿಕೊಡಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

Update: 2016-07-16 19:47 IST

ಮಂಗಳೂರು, ಜು.16: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಾನಸಭಾ ಅಧಿವೇಶನ ನಡೆಯಲು ಬಿಡದೆ ಬ್ಲಾಕ್‌ಮೇಲ್ ಮಾಡುತ್ತಿರುವ ಬಿಜೆಪಿಯು ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಒಂದೇ ಒಂದು ಗಂಭೀರ ಸಾಕ್ಷವನ್ನು ದಾಖಲೆ ಸಮೇತ ನೀಡಿದರೆ ಸರಕಾರ ಕ್ರಮ ಕೈಗೊಳ್ಳುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಜೆ. ಜಾರ್ಜ್ ಯಾವುದೇ ತಪ್ಪು ಮಾಡಿಲ್ಲ ಎನ್ನುವುದಕ್ಕೆ ನಮ್ಮಲ್ಲಿ ಅನೇಕ ಸಾಕ್ಷಗಳಿದೆ. ಆದರೆ ಅವರು ತಪ್ಪು ಮಾಡಿದ್ದಾರೆ ಎಂದು ಆಪಾದಿಸುವ ವಿಪಕ್ಷಗಳು ಅವರ ವಿರುದ್ಧ ಒಂದೇ ಒಂದು ಗಂಭೀರ ಸಾಕ್ಷವನ್ನು ದಾಖಲೆ ಸಮೇತ ತೋರಿಸುತ್ತಿಲ್ಲ. ಯಾರದೋ ಸಮಾಧಾನಕ್ಕಾಗಿ ಕೆ.ಜೆ. ಜಾರ್ಜ್‌ರನ್ನು ಸಚಿವ ಸಂಪುಟದಿಂದ ತೆಗೆಯಲು ಆಗುವುದಿಲ್ಲ ಎಂದು ಹೇಳಿದರು.

ನಮಗೆ ಸರಕಾರ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ವಿಶ್ವಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರ ಬಗ್ಗೆಯೂ ವಿಶ್ವಾಸವಿದೆ. ಯಾರೋ ಹೇಳಿದಕ್ಕೆ ಸಚಿವರನ್ನು ಬಲಿಕೊಡಲು ಆಗುವುದಿಲ್ಲ ಎಂದು ಹೇಳಿದರು.

ಬಿಜೆಪಿಯನ್ನು ನಂಬಬೇಡಿ: ಗಣಪತಿ ಪತ್ನಿ ಪಾವನಾಗೆ ಸಲಹೆ

ಎಂ.ಕೆ.ಗಣಪತಿ ಪತ್ನಿ ಪಾವನಾ ಅವರು ಬಿಜೆಪಿಯನ್ನು ನಂಬಬೇಡಿ. ಪಾವನಾ ಅವರ ಭಾವನೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಅವರನ್ನು ದುರುಪಯೋಗ ಮಾಡುತ್ತದೆ. ಬಿಜೆಪಿಯವರಿಗೆ ಕೇವಲ ರಾಜಕೀಯ ಲಾಭ ಬೇಕು. ಡಿ.ಕೆ.ರವಿ ಪ್ರಕರಣದಲ್ಲಿಯೂ ಅವರು ಇದೇ ರೀತಿ ವರ್ತಿಸಿದ್ದರು. ಸಿಬಿಐಗೆ ಪ್ರಕರಣವನ್ನು ನೀಡಿ ಒಂದು ವರ್ಷ ಕಳೆದರೂ ಅದರ ವರದಿ ಇನ್ನು ಬಂದಿಲ್ಲ. ಡಿ.ಕೆ. ರವಿ ಪ್ರಕರಣದ ವರದಿಯನ್ನು ನೀಡುವಂತೆ ಬಿಜೆಪಿ ಒತ್ತಾಯವನ್ನೂ ಮಾಡಿಲ್ಲ. ಡಿ.ಕೆ. ರವಿ ಪ್ರಕರಣದಲ್ಲಿ ಅವರ ತಾಯಿಯನ್ನು ಭಾವನಾತ್ಮಕವಾಗಿ ದುರುಪಯೋಗ ಮಾಡಿಕೊಂಡರು. ಪ್ರಧಾನಿಯವರಿಗೂ ಈ ಬಗ್ಗೆ ಒತ್ತಾಯವನ್ನು ಹಾಕಿಲ್ಲ. ಇದೇ ರೀತಿ ಗಣಪತಿ ಪ್ರಕರಣದಲ್ಲಿ ಪಾವನಾ ಅವರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಯಾವುದನ್ನೂ ಮುಚ್ಚಿಡುತ್ತಿಲ್ಲ. ಸತ್ಯಾಂಶ ಹೊರಬರಬೇಕು. ನಮ್ಮ ಸರಕಾರ ಇದ್ದಾಗ ಗಣಪತಿ ಅವರಿಗೆ ಯಾವುದೇ ರೀತಿಯ ಕಿರುಕುಳ ಆಗಿಲ್ಲ. ಆಗಿದ್ದರೆ ಅದರ ದಾಖಲೆಯನ್ನು ಕೊಡಿ ಎಂದು ವಿಪಕ್ಷವನ್ನು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಪ್ರಕರಣದ ಬಗ್ಗೆ ಸರಕಾರ ಉತ್ತರ ಕೊಟ್ಟಿದೆ. ಆದರೆ ವಿಧಾನಸಭಾ ಅಧಿವೇಶನ ನಡೆಯಲು ಬಿಡದೆ ವಿರೋಧ ಪಕ್ಷಗಳು ಬ್ಲಾಕ್‌ಮೇಲ್ ಮಾಡುತ್ತಿವೆ ಎಂದು ಆಪಾದಿಸಿದರು.

ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಜನರ ಮನಸ್ಸನ್ನು ಹಾಳು ಮಾಡುತ್ತಿದೆ. ನಮ್ಮ ಪಕ್ಷ ಮತ್ತು ಸರಕಾರದ ವಿರುದ್ಧ ಅಪಪ್ರಚಾರವನ್ನು ನಡೆಸುತ್ತಿವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News