ಮುಂದಿನ ವರ್ಷದೊಳಗೆ ಪ್ರತಿ ತಾಲೂಕಿಗೆ ಸೋಲಾರ್ ವಿದ್ಯುತ್ ಯೋಜನೆ ಪೂರ್ಣ: ಡಿಕೆಶಿ

Update: 2016-07-16 14:40 GMT

ಮಂಗಳೂರು, ಜು. 16: ರಾಜ್ಯದ ಪ್ರತಿ ತಾಲೂಕಿನಲ್ಲಿ ಸೋಲಾರ್ ವಿದ್ಯುತ್ ಅಳವಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 100 ತಾಲೂಕುಗಳಲ್ಲಿ ಸೋಲಾರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ರಾಜ್ಯ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಶನಿವಾರ ನಗರದಲ್ಲಿ ಮೆಸ್ಕಾಂ ಮತ್ತು ಕ.ವಿ.ಪ್ರ.ನಿಗಮಕ್ಕೆ ನೂತನವಾಗಿ ನೇಮಕಾತಿ ಹೊಂದಿದ ಅಧಿಕಾರಿಗಳು ಮತ್ತು ನೌಕರರಿಗಾಗಿ ಆಯೋಜಿಸಿದ್ದ ‘ಅಭಿ ಶಿಕ್ಷಣ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆಯನ್ವಯ ರಾಜ್ಯದ ಪ್ರತಿ ತಾಲೂಕಿನಲ್ಲಿ ಸೋಲಾರ್ ಅಳವಡಿಕೆ ಮೂಲಕ 20ರಿಂದ 25 ಮೆಗಾವ್ಯಾಟ್ ವಿದ್ಯುತ್‌ನ್ನು ಉತ್ಪಾದಿಸಿ ಆಯಾ ಭಾಗದಲ್ಲಿ ಹಂಚುವ ಗುರಿ ಹೊಂದಲಾಗಿದೆ ಎಂದರು.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 11,592 ನೌಕರರನ್ನು ವಿದ್ಯುತ್ ಸರಬರಾಜು ಕಂಪೆನಿಗೆ ನೇಮಕ ಮಾಡಲಾಗಿದೆ. ಈ ಪೈಕಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ವಿದ್ಯುತ್ ಕಾಮಗಾರಿ, ಕಿರಿಯ ಮಾರ್ಗದಾಳು(ಲೈನ್‌ಮ್ಯಾನ್) ಸಹಿತ ಮೆಸ್ಕಾಂಗೆ 2,308 ನೌಕರರ ನಿಯೋಜನೆಯಾಗಿದೆ. ಮುಂದಿನ ಮೂರು ತಿಂಗಳೊಳಗೆ ಪುನಃ 10 ಸಾವಿರ ನೌಕರರನ್ನು ನೇಮಕ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಅಖಿಲಭಾರತ ಮಟ್ಟದಲ್ಲಿ ಮೆಸ್ಕಾಂ 5ನೆ ಸ್ಥಾನದಲ್ಲಿದ್ದು, ಸಿಬ್ಬಂದಿ ಇನ್ನಷ್ಟು ದಕ್ಷತೆಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದ ಅವರು, ಸಾರ್ವಜನಿಕರಿಗೆ ತಮ್ಮ ದೂರು ದಾಖಲಿಸಲು 1912 ಸಂಖ್ಯೆ ನೀಡಲಾಗಿದ್ದು, ಇದರ ಸದುಪಯೋಗ ಪಡೆಯುವಂತೆ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೆಪಿಟಿಸಿಎಲ್ ಎಂಡಿ ಜಾವೆದ್ ಅಖ್ತರ್, ಮೆಸ್ಕಾಂ ಅಧಿಕಾರಿಗಳಾದ ಡಿ.ಆರ್.ಶ್ರೀನಿವಾಸ್, ಪಿ.ಎಸ್.ಎನ್.ಕುಮಾರ್, ಆನಂದ ನಾಯಕ್, ಕುಮಾರ್, ಆದಿ ನಾರಾಯಣ, ನಿರ್ದೇಶಕರಾದ ರಾಮಕೃಷ್ಣ, ಸುರೇಂದ್ರ ಕಂಬಳಿ, ಮಲ್ಲಿಕಾ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News