ವಿಟ್ಲ ಪಟ್ಟಣ ಪಂಚಾಯತ್‌ನ ಪ್ರಥಮ ಅಧ್ಯಕ್ಷರಾಗಿ ಅರುಣ್ ವಿಟ್ಲ ಆಯ್ಕೆ
ಬಂಟ್ವಾಳ, ಜು. 16: ಕಳೆದ ವರ್ಷ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ 12 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅ್ಯರ್ಥಿ ಅರುಣ್ ಎಂ. ವಿಟ್ಲ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯತ್‌ನ 18 ಸ್ಥಾನಗಳಿಗೆ ಎಪ್ರಿಲ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಅ್ಯರ್ಥಿಗಳು ವಿಜಯ ಸಾಧಿಸಿದ್ದರೆ 6 ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತೃಪ್ತಿ ಪಡೆದುಕೊಂಡಿತ್ತು. ತಾಂತ್ರಿಕ ತೊಂದರೆಗಳಿಂದಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಈವರೆಗೆ ನಡೆಯದೆ ಬಾಕಿಯಾಗಿತ್ತು.
12 ಮಂದಿ ಬಿಜೆಪಿ ಸದಸ್ಯರ ಎಲ್ಲ ಮತ ಅರುಣ್ ವಿಟ್ಲರಿಗೂ, ಕಾಂಗ್ರೆಸ್ ಸದಸ್ಯರ ಎಲ್ಲ 6 ಮತಗಳು ಅಬ್ದುಲ್ ರಹಿಮಾನ್ ಹಸೈನಾರ್‌ರಿಗೂ ಚಲಾವಣೆಯಾಯಿತು. ಆ ಮೂಲಕ ಅರುಣ್ ವಿಟ್ಲ 6 ಮತಗಳ ಅಂತರದಲ್ಲಿ ಜಯಗಳಿಸಿ ಚೊಚ್ಚಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದರು. ಚುನಾವಣಾ ಶಾಖೆಯ ಶಿರಸ್ತೆದಾರ ಪರಮೇಶ್ವರ ನಾಯ್ಕ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಪ್ರಕಾಶ್, ಗ್ರಾಮ ಸಹಾಯಕ ರುಕ್ಮಯ ಮತ್ತಿತರರು ಹಾಜರಿದ್ದರು.
ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕ ರುಕ್ಮಯ, ಸಿಬ್ಬಂದಿಯಾದ ಜಯಕುಮಾರ್, ರಮೇಶ್, ಅನುಕುಮಾರ್ ಬಂದೋಬಸ್ತು ಕಲ್ಪಿಸಿದರು.