×
Ad

ಸಂಪಾಜೆ: ವಿದ್ಯುತ್ ಸಬ್‌ಸ್ಟೇಶನ್‌ಗೆ ಜಮೀನು ನೀಡಲು ಆಗ್ರಹಿಸಿ ಗ್ರಾ.ಪಂ.ಸದಸ್ಯರಿಂದ ಧರಣಿ

Update: 2016-07-16 21:26 IST

ಸುಳ್ಯ, ಜು.16: ಸಂಪಾಜೆಯಲ್ಲಿ 33 ಕೆವಿ ವಿದ್ಯುತ್ ಸಬ್‌ಸ್ಟೇಶನ್, ಸ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಪೊಲೀಸ್ ಠಾಣೆಗಳಿಗೆ ಜಮೀನು ನೀಡುವಂತೆ ಆಗ್ರಹಿಸಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಸುಳ್ಯ ತಾಲೂಕು ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.

ಸಂಪಾಜೆಯಲ್ಲಿ 33 ಕೆವಿ ವಿದ್ಯುತ್ ಸಬ್‌ಸ್ಟೇಶನ್ ನಿರ್ಮಿಸುವಂತೆ ಆ ಭಾಗದ ಜನರು ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸಬ್‌ಸ್ಟೇಶನ್‌ಗೆ ಅಲ್ಲಿ 2 ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಆದರೆ ಅದು ಅರಣ್ಯ ಭೂಮಿಯಾಗಿದ್ದರಿಂದ ಸಮಸ್ಯೆ ಎದುರಾಗಿತ್ತು. ಕಂದಾಯ-ಅರಣ್ಯ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲದೆ ಜಮೀನು ಇನ್ನೂ ಮೆಸ್ಕಾಂ ಹೆಸರಿಗೆ ಆಗಿಲ್ಲ. ಹಾಗಾಗಿ ಅಲ್ಲಿ ಸಬ್‌ಸ್ಟೇಶನ್ ಕಾಮಗಾರಿಗಳು ಆರಂಭವಾಗಿಲ್ಲ. ಸಮಸ್ಯೆ ಕುರಿತು ತಾಲೂಕು ಪಂಚಾಯತ್, ಕೆಡಿಪಿ ಸಭೆಗಳಲ್ಲೂ ಹಲವು ಬಾರಿ ಚರ್ಚೆ ನಡೆದಿತ್ತು. ಕಾಯ್ದಿರಿಸಿದ ಜಮೀನನ್ನು ತಕ್ಷಣ ಮೆಸ್ಕಾಂ ಹೆಸರಿಗೆ ಮಾಡಬೇಕು ಎಂದು ಗ್ರಾಮ ಪಂಚಾಯತ್‌ನ ಎಲ್ಲಾ 14 ಸದಸ್ಯರು ಶನಿವಾರ ಬೆಳಗ್ಗೆ 10 ಗಂಟೆಗೆ ತಾಲೂಕು ಕಚೇರಿ ಎದುರು ಧರಣಿ ಕುಳಿತರು.

ಪೂರ್ವಾಹ್ನ 11 ಗಂಟೆ ವೇಳೆಗೆ ಆಗಮಿಸಿದ ತಹಶೀಲ್ದಾರ್ ಅನಂತ ಶಂಕರ್ ಹಾಗೂ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ಧರಣಿನಿರತರ ಅಹವಾಲು ಆಲಿಸಿದರು. ವಿದ್ಯುತ್ ಸಬ್‌ಸ್ಟೇಶನ್, ಸ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಪೊಲೀಸ್ ಠಾಣೆಗಳಿಗೆ ಜಮೀನು ನೀಡುವಂತೆ ಆಗ್ರಹಿಸಿದರು. ಸ್ಮಶಾನಕ್ಕೆ 3 ಎಕರೆ ಜಮೀನು ನೀಡಿದ್ದರೂ ಅರಣ್ಯ ಇಲಾಖೆ ಅಲ್ಲಿ ಶವ ದಹನ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಸದಸ್ಯ ಸೋಮಶೇಖರ ಕೊಯಿಂಗಾಜೆ ದೂರಿದರು.

ತಾಲೂಕಿನಲ್ಲಿ ಎಲ್ಲಡೆ ಅರಣ್ಯ ಭೂಮಿಯೇ ಇರುವುದರಿಂದ ಸಮಸ್ಯೆ ಆಗಿದೆ ಎಂದು ತಹಶೀಲ್ದಾರ್ ಅನಂತ ಶಂಕರ್ ಹೇಳಿದರು. ಕಂದಾಯ ಇಲಾಖೆ ಅಜ್ಜಾವರದಲ್ಲಿ ಬದಲಿ ಜಮೀನು ನೀಡಿದ್ದು, ವಿಸ್ತೀರ್ಣ ಕಡಿಮೆ ಆಗಿದೆ. ಹಾಗಾಗಿ ಅದನ್ನು ಸರಿಪಡಿಸಿ ಸಂಪಾಜೆಯ ಕಾಯ್ದಿಟ್ಟ ಭೂಮಿಯನ್ನು ಈ ದಿನವೇ ಮೆಸ್ಕಾಂಗೆ ಹಸ್ತಾಂತರಿಸುವುದಾಗಿ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಭರವಸೆ ನೀಡಿದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಕಡೆಪಾಲ, ಉಪಾಧ್ಯಕ್ಷೆ ಆಶಾ ವಿನಯಕುಮಾರ್, ಸದಸ್ಯರಾದ ಜಿ.ಕೆ.ಹಮೀದ್, ಪಿ.ಕೆ.ಅಬುಶಾಲಿ, ಪಿ.ಆರ್.ನಾಗೇಶ್, ಷಣ್ಮುಗಂ, ಸುಂದರ, ಟಿ.ಐ.ಲುಕಾಸ್, ಸುಂದರಿ ಮುಂಡಡ್ಕ, ಮೋಹಿನಿ ಪೆಲ್ತಡ್ಕ, ಲೇತಿಶ್ಯಾ ಡಿ ಸೋಜ, ಉಷಾ ರಾಮ, ಕುಸುಮಾ ಉಪಸ್ಥಿತರಿದ್ದರು.

ತಾಲೂಕು ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ನಡೆಸಿದ್ದೇವೆ. ವಾರದಲ್ಲಿ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಈಡೇರದಿದ್ದರೆ ಎಲ್ಲಾ 14 ಗ್ರಾಮದ ಜನರನ್ನು ಸೇರಿಸಿ ಅರಣ್ಯ ಅಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಲಾಖೆಗಳ, 33 ಕೆವಿ ವಿದ್ಯುತ್ ಸಬ್‌ಸ್ಟೇಶನ್ 14 ಗ್ರಾಮಕ್ಕೆ ಸಂಬಂಧಿಸಿದ್ದು, ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲದೇ ಇರುವುದರಿಂದ 15 ವರ್ಷಗಳಿಂದ ಜಮೀನು ವಿವಾದ ಮುಗಿದಿಲ್ಲ. ವಾರದಲ್ಲಿ ಮೆಸ್ಕಾಂಗೆ ಜಮೀನು ಹಸ್ತಾಂತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಡೇರದಿದ್ದರೆ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸಂಪಾಜೆಯಲ್ಲಿ ವಿದ್ಯುತ್ ಸಬ್‌ಸ್ಟೇಶನ್‌ಗೆ ಗುರುತಿಸಿದ್ದ ಎರಡು ಎಕರೆ ಜಮೀನು ಅರಣ್ಯ ಭೂಮಿ ಆಗಿರುವುದರಿಂದ ಸಮಸ್ಯೆ ಆಗಿತ್ತು. ಬದಲಿ ಜಾಗ ನೀಡುವ ಮೂಲಕ ಸಮಸ್ಯೆ ಬಗೆಹರಿದಿದ್ದು, ಶೀಘ್ರ ಮೆಸ್ಕಾಂಗೆ ಹಸ್ತಾತರಿಸಲಾಗುವುದೆಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಜ್ಜಾವರದಲ್ಲಿ ಕಂದಾಯ ಇಲಾಖೆಯವರು ಬದಲಿ ಜಮೀನನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ದಾಖಲೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸ್ಮಶಾನಕ್ಕೆ ಮೀಸಲಿಟ್ಟ ಜಮೀನು ಅರಣ್ಯ ಭೂಮಿ ಅಲ್ಲ. ಅಲ್ಲಿ ಯಾವುದೇ ಗೊಂದಲ ಇಲ್ಲ. ಗಡಿ ಗುರುತು ಸರಿಮಾಡಿ ಕೊಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News