ಬಂಟ್ವಾಳ: ವೃತ್ತ ನಿರೀಕ್ಷಕ ಬೆಳ್ಳಿಯಪ್ಪರಿಗೆ ಬೀಳ್ಕೊಡುಗೆ

Update: 2016-07-16 17:06 GMT

ಬಂಟ್ವಾಳ, ಜು. 16: ಎಡೆಬಿಡದ ಒತ್ತಡಗಳ ನಡುವೆಯೂ ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ ಜನಮನ್ನಣೆ ಗಳಿಸುತ್ತಾರೆ. ಇಂತಹಾ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಹೆಮ್ಮೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ಬಂಟ್ವಾಳ ವೃತ್ತದಿಂದ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಪಾಂಡೇಶ್ವರಕ್ಕೆ ವರ್ಗಾವಣೆಗೊಂಡ ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳ್ಳಿಯಪ್ಪ ಅವರು ಪೊಲೀಸ್ ಇಲಾಖೆಗೆ ದೊಡ್ಡ ಆಸ್ತಿ ಎಂದರಲ್ಲದೆ, ಬೆಳ್ಳಿಯಪ್ಪರ ಹೆಸರಿನಲ್ಲಿ ಬೆಳ್ಳಿ ಅಡಗಿದ್ದರೂ, ಕರ್ತವ್ಯದಲ್ಲಿ ಚಿನ್ನ ಆಗಿದ್ದಾರೆ ಎಂದು ಶ್ಲಾಘಿಸಿದರು.

ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪಮಾತನಾಡಿ, ಸಹದ್ಯೋಗಿ ಪೊಲೀಸ್ ಸಿಬ್ಬಂದಿಯ ನೆರವಿನಿಂದ, ಮೇಲಧಿಕಾರಿಗಳ ಪ್ರೋತ್ಸಾಹದಿಂದ ತಾನು ಕಾರ್ಯನಿರ್ವಹಿಸಿದ್ದು, ಸಹಕರಿಸಿದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿಭಾಸ್ಕರ ರೈ, ನೂತನ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ಠಾಣಾಧಿಕಾರಿಗಳಾದ ನಂದಕುಮಾರ್, ರಕ್ಷಿತ್ ಗೌಡ, ಪ್ರಕಾಶ್ ದೇವಾಡಿಗ, ಶೋಭಿತಾ ಬೆಳ್ಳಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ಸಂಚಾರಿ ಠಾಣಾ ಉಪನಿರೀಕ್ಷಕ ಚಂದ್ರಶೇಖರಯ್ಯ ಸ್ವಾಗತಿಸಿದರು. ಸಿಬ್ಬಂದಿ ಸುಬ್ರಾಯ ಗೌಡ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News