×
Ad

ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ-ಗಂಗಾಧರ್ ನಾಯ್ಕ ವಿಷಾದ

Update: 2016-07-17 15:54 IST

ಭಟ್ಕಳ, ಜು.17: ಇಂದಿನ ದಿನಗಳಲ್ಲಿ ಭಟ್ಕಳದ ಮಲ್ಲಿಗೆ ಬೇರೆ ಬೇರೆ ಕಾರಣಗಳಿಂದ ತನ್ನಕಂಪನ್ನು ಕಳೆದುಕೊಳ್ಳುತ್ತಿದೆ ಎಂದು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಯಲಯ ಉಪನ್ಯಾಸಕ ಗಂಗಾಧರ್ ನಾಯ್ಕ ವಿಷಾದ ವ್ಯಕ್ತಪಡಿಸಿದರು.

ಅವರು  ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ಎಜ್ಯುಕೇಶನ್ ಸೂಸೈಟಿ ಶಿಕ್ಷಣ ಸಂಸ್ಥೆಯ ನ್ಯೂ ಶಮ್ಸ್ ಸ್ಕೂಲ್ ಸಭಾಂಗಣದಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್, ನ್ಯೂಶಮ್ಸ್ ಸ್ಕೂಲ್ ಹಾಗೂ ಜಮಾಅತೆ ಇಸ್ಲಾಹಿ ಹಿಂದ್ ಭಟ್ಕಳ ಶಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಈದ್ ಸೌಹಾರ್ದ ಭೋಜನ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ಭಟ್ಕಳದ ಹಿಂದು ಮುಸ್ಲಿಮ್ ಸೌಹಾರ್ದತೆಗೆ ಒಂದು ಇತಿಹಾಸವೇ ಇದ್ದು ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಮುಸ್ಲಿಮ್ ಕುಟುಂಬಕ್ಕೆಆಹ್ವಾನ ನೀಡುವುದರೊಂದಿಗೆ ಚಾಲನೆ ನೀಡಲ್ಪಡುತ್ತದೆ ಇದು ಇಂದಿಗೂ ಜೀವಂತವಾಗಿದೆ ಇಲ್ಲಿನ ಸೌಹಾರ್ದತೆಗೆ ಇದೊಂದು ಉತ್ತಮ ಉದಾಹರಣೆ. ಯಾವತ್ತೂ ತನ್ನ ಕಂಪನ್ನು ಸೂಸುವ ಮಲ್ಲಿಗೆಯೂ ಇಂದು ಬೇರೆ ಬೇರೆ ಕಾರಣಗಳಿಗಾಗಿ ತನ್ನಕಂಪನ್ನು ಕಳೆದುಕೊಳ್ಳುತ್ತಿದ್ದು ಇದರ ಕಂಪು ಮಾಸದಂತೆ ನೋಡಿಕೊಳ್ಳುವುದು ನಮ್ಮೆಲ್ಲಾ ಹೊಣೆಗಾರಿಕೆಯಾಗಿದೆ ಎಂದರು. ಭಟ್ಕಳದಲ್ಲಿ ನ್ಯೂ ಶಮ್ಸ್ ಸ್ಕೂಲ್ ಹರಿದ ಶಾಮಿಯಾನವನ್ನು ಹೊಲೆಯುವ ದರ್ಜಿಯ ಕೆಲಸ ಮಾಡುತ್ತಿದ್ದು ಇದು ಶಾಂತಿ ಸೌಹಾರ್ತೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ಪ್ರಪಂಚದಲ್ಲಿ ವೈಪರೀತ್ಯ, ವೈರುದ್ಯಗಳು ಇದ್ದು ಇದರ ನಡುವೆಯೂ ಭಾರತೀಯರಾದ ನಾವು ಒಂದು ಕುಟುಂಬದಂತೆ ಬದುಕುತ್ತಿದ್ದೇವೆ. ಇದೇ ಭಾರತದ ವೈಶಿಷ್ಠ್ಯತೆಯಾಗಿದೆ. ಇಂದು ದೇಶ ಸಂಧಿಗ್ನ ಪರಿಸ್ಥಿತಿ ತಲೆದೂರಿದ್ದು, ಧರ್ಮ ಧರ್ಮಗಳ ಮಧ್ಯೆ ಬಿರುಕು ಉಂಟಾಗುತ್ತಿದೆ.

ಮೇರೆ ಅಲ್ಲಾಹ ಬುರಾಯಿಸೆ ಬಚಾನ ಮುಜ್ಕೂ' ಎಂಬ ಅಲ್ಲಮಾ ಇಕ್ಬಾಲರ ಪ್ರಾರ್ಥನೆಯನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಅದರ ಅರ್ಥವನ್ನು ವಿವರಿಸಿದ ಅವರು ನನ್ನ ದೇಶದ ಉದ್ಯಾನಕ್ಕೆ ನಾನೊಂದು ಹೂವಾಗಿ ದೇಶಕ್ಕೆ ಕಳೆ ತರುವಂತಹ ಕೆಲಸ ಕಾರ್ಯಗಳು ನಮ್ಮಿಂದಾಗಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಈದುಲ್ ಫಿತ್ರ್ ಹಬ್ಬದ ಸಂದೇಶ ನೀಡಿದ ಜಮಾಅತೆಇಸ್ಲಾಮಿ ಹಿಂದ್ ಮಂಗಳೂರು ಘಟಕದ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಪುತ್ತೂರು, ನಮ್ಮ ಮನಸ್ಸಿನ ಕೊಳೆಯನ್ನು ಶುಚಿಗೊಳಿಸಿಕೊಳ್ಳುವಲ್ಲಿ ರಮಝಾನ್ ತಿಂಗಳ ಉಪವಾಸ ವೃತಗಳಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ, ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಎನ್.ಮೂರ್ತಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜುಕಾಕು, ಭಟ್ಕಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಯ್ಕ, ಪ್ರೌಢಶಾಲಾ ಸಹಶಿಕ್ಷಕರ ಸಂಘದಅಧ್ಯಕ್ಷ ಜಂಬೂರಮಠ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಭಟ್ಕಳ ಘಟಕದಅಧ್ಯಕ್ಷ ಎ.ಬಿ.ಮಡಿವಾಳ, ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಅಧ್ಯಕ್ಷ ಮುಜಾಹಿದ್ ಮುಸ್ತಫಾ, ಶಮ್ಸ್ ಸ್ಕೂಲ್ ಬೋರ್ಡ ಅಧ್ಯಕ್ಷಕಾದಿರ್ ಮೀರಾ ಪಟೇಲ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಮೌಲಾನ ಅಬ್ದುಲ್ಲಾರಬಿ ನದ್ವಿ ಕುರ್ ಆನ್ ಪಠಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ನಾಯ್ಕ ವಂದಿಸಿದರು. ಮುಹಮ್ಮದ್ ಇಲ್ಯಾಸ್ ಕಾರ್ಯಕ್ರಮ ನಿರೂಪಿಸಿದರು.

 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News