ಎಸ್ಮಾ ಜಾರಿ ಮಾಡಿದರೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ: ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘ
ಮಂಗಳೂರು, ಜು.17: ರಾಜ್ಯ ಸರಕಾರ ಕೆಎಸ್ಸಾರ್ಟಿಸಿ ನೌಕರರ ವೇತನವನ್ನು ಏಕಪಕ್ಷೀಯವಾಗಿ ಶೇ.8 ಹೆಚ್ಚಳ ಮಾಡಿರುವುದರ ವಿರುದ್ಧ ಕೆಎಸ್ಸಾರ್ಟಿಸಿ ನೌಕರರು ಜು.25ರಿಂದ ನಡೆಸಲಿರುವ ಅನಿರ್ಧಿಷ್ಟಾವಧಿ ಮುಷ್ಕರ ವಿಫಲಗೊಳಿಸಲು ಸರಕಾರ ಎಸ್ಮಾ ಪ್ರಯೋಗಿಸಿದರೂ ಹೆದರುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಇದರ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.
ಅವರು ಇಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ಆಶ್ರಯದಲ್ಲಿ ನಗರದ ಬಿಜೈನ ಕರ್ಣಾಟಕ ಬ್ಯಾಂಕ್ ಎಂಪ್ಲೋಯಿಸ್ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜು.25ರಿಂದ ನಡೆಯಲಿರುವ ಸಾರಿಗೆ ಕಾರ್ಮಿಕರ ಮುಷ್ಕರದ ಸಿದ್ಧತಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಜ್ಯ ಸರಕಾರ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸದೆ ಏಕಪಕ್ಷೀಯವಾಗಿ ವೇತನ ಹೆಚ್ಚಳ ಮಾಡಿದೆ. ನಮ್ಮ ಹಲವಾರು ಬೇಡಿಕೆಗಳನ್ನು ಪರಿಗಣಿಸದೆ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹಾಕಿ ತಪ್ಪಿಸಿಕೊಂಡಿದ್ದಾರೆ. ಸಾರಿಗೆ ಕಾರ್ಮಿಕರು ಮುಷ್ಕರ ನಡೆಸುವಂತಹ ಪರಿಸ್ಥಿತಿಯನ್ನು ಸರಕಾರ ಸೃಷ್ಟಿಸಿದೆ. ಸರಕಾರ ಇತಿಹಾಸದಿಂದ ಪಾಠ ಕಲಿಯದೆ ಮತ್ತೆ ಮತ್ತೆ ಕಾರ್ಮಿಕ ವಿರೋಧಿ ನೀತಿಯನ್ನು ಮುಂದುವರಿಸಿದೆ ಎಂದು ಹೇಳಿದರು.
ಜು.25 ರಿಂದ ನಡೆಯುವ ಸಾರಿಗೆ ಕಾರ್ಮಿಕರ ಮುಷ್ಕರದಲ್ಲಿ 1.25 ಲಕ್ಷ ನೌಕರರು ಭಾಗವಹಿಸಲಿದ್ದಾರೆ. ಇದರಿಂದ ಸಮಸ್ಯೆಯಾಗುವ ಬಗ್ಗೆ ರಾಜ್ಯದ ಯಾವುದೇ ಶಾಸಕರು ಮಾತನಾಡುತ್ತಿಲ್ಲ. ಸಾರಿಗೆ ನೌಕರರನ್ನು ಗುಲಾಮರಂತೆ, ಜೀತದಾಳುಗಳಂತೆ ದುಡಿಸುವ ಕ್ರಮ ಈ ಮುಷ್ಕರದಿಂದ ಕೊನೆಯಾಗಬೇಕು ಎಂದು ಹೇಳಿದರು.
ಕಾರ್ಮಿಕ ವರ್ಗಕ್ಕೆ ಯಾವುದೇ ಸರಕಾರವು ಸವಾಲು ಹಾಕಬಾರದು. ಸವಾಲು ಹಾಕುವ ಮೊದಲು ಇತಿಹಾಸದ ಪುಟಗಳನ್ನು ಅವರು ನೋಡಲಿ ಎಂದು ಹೇಳಿದರು.
ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ಅಧಿಕಾರಿಗಳ ದೌರ್ಜನ್ಯಕ್ಕೆ ಹಲವು ಮಂದಿ ಆತ್ಮಹತ್ಯೆಗೈದಿದ್ದಾರೆ. ಸರಕಾರ ಈ ಬಗ್ಗೆ ತನಿಖೆ ನಡೆಸುವ ಕೆಲಸ ಮಾಡಿಲ್ಲ. ಕನಿಷ್ಠ ಇಲಾಖಾ ತನಿಖೆಯನ್ನೂ ನಡೆಸಲಾಗಿಲ್ಲ. ಕೆಎಸ್ಸಾರ್ಟಿಸಿ ನೌಕರರ ಗೋಳನ್ನು ಕೇಳುವವರೇ ಇಲ್ಲವಾಗಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ)ಮಂಗಳೂರು ವಿಭಾಗದ ಅಧ್ಯಕ್ಷ ಬಿ.ಕೆ.ಕೃಷ್ಣಪ್ಪ ವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಅಧ್ಯಕ್ಷ ಕೆ.ಎಸ್.ಶರ್ಮ, ಇಂಟಕ್ ರಾಜ್ಯ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಇಂಟಕ್ ಜಿಲ್ಲಾ ಸಮಿತಿಯ ಅಧ್ಯಕ್ಷ ಮನೋಹರ್ ಶೆಟ್ಟಿ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಪ್ರ.ಕಾರ್ಯದರ್ಶಿ ಜಯದೇವರಾಜ್ ಅರಸ್, ಕೆಎಸ್ಸಾರ್ಟಿಸಿ ಸ್ಟಾಫ್, ವರ್ಕರ್ ಯೂನಿಯನ್ ಬಿಎಂಟಿಸಿ ವಿಭಾಗದ ಪ್ರ.ಕಾರ್ಯದರ್ಶಿ ಗಿರೀಶ್, ಕರ್ಣಾಟಕ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ ಪ್ರ.ಕಾರ್ಯದರ್ಶಿ ಪಿ.ಆರ್.ಕಾರಂತ, ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ)ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ವಿಜಯಕುಮಾರ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ವಾಲ್ಟರ್ ಪಿಂಟೋ, ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರಿಹಾನ್ ಶೇಖ್ ಉಪಸ್ಥಿತರಿದ್ದರು.
ಬಾಲಕೃಷ್ಣ ಡಿ. ಸ್ವಾಗತಿಸಿದರು. ಕೃಷ್ಣ ಡಿ. ಕಾರ್ಯಕ್ರಮ ನಿರೂಪಿಸಿದರು.