×
Ad

ನಾಡದೋಣಿ ಮೀನುಗಾರರಿಗೆ 1 ಕೋಟಿ ರೂ. ಪರಿಹಾರ

Update: 2016-07-17 18:06 IST

ಮಂಗಳೂರು, ಜು.17; ನಾಡದೋಣಿ ಮೂಲಕ ದುಡಿಯುತ್ತಿರುವ ಬೈಕಂಪಾಡಿ ಆಸುಪಾಸಿನ ಮೀನುಗಾರರಿಗೆ ಒಂದು ಕೋಟಿ ರೂಪಾಯಿ ಮೊತ್ತ ಪರಿಹಾರವನ್ನು ಮಂಗಳೂರು ಎಸ್‌ಇಝಡ್ ಸಂಸ್ಥೆ ನೀಡುವಂತೆ ಶಾಸಕ ಬಿ.ಎ ಮೊಯ್ದಿನ್ ಬಾವ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಾಡದೋಣಿ ಮೀನುಗಾರ ಮುಖಂಡರ ಹಾಗೂ ಎಂಎಸ್‌ಝಡ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಸಮುದ್ರಕ್ಕೆ ಎಂಎಸ್‌ಇಝಡ್ ಬಿಡುವ ತ್ಯಾಜ್ಯದಿಂದ ಇತ್ತೀಚಿನ ವರ್ಷಗಳಲ್ಲಿ ನಾಡದೋಣಿಗಳಿಗೆ ಸಾಕಷ್ಟು ಮೀನಿನ ಕೊರತೆಯಾಗಿ ಮೀನುಗಾರರು ನಷ್ಟ ಅನುಭವಿಸಿದ್ದು, ಪಣಂಬೂರು ಎನ್‌ಎಂಪಿಟಿ ಜಾಗದಲ್ಲಿ ಕಾರ್ಯಾಚರಿಸುತ್ತಿದ್ದ ನಾಡದೋಣಿ ಮೀನುಗಾರರು ತಮಗೆ ಸೂಕ್ತ ಪರಿಹಾರ ನೀಡಲು ಕಳೆದ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರು.

ಮೀನುಗಾರರ ಈ ಬೇಡಿಕೆಗೆ ಸ್ಪಂದಿಸಿದ ಶಾಸಕ ಮೊಯ್ದಿನ್ ಬಾವ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ನಾಡದೋಣಿ ಮೀನುಗಾರರಿಗೆ ಪರಿಹಾರ ನೀಡಲು ಒಪ್ಪಿಕೊಂಡಿದ್ದ ಎಂಎಸ್‌ಇಝಡ್, ಇದಕ್ಕಾಗಿ ಒಂದು ಕೋಟಿ ರೂ. ಮೊತ್ತವನ್ನು ನೀಡಿತ್ತು. ಈ ಮೊತ್ತವನ್ನು ಮಂಗಳೂರು ಸಹಾಯಕ ಆಯುಕ್ತರ ಜಂಟಿ ಖಾತೆಯಲ್ಲಿ ಇಡಲಾಗಿತ್ತು. ಆದರೆ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ಪರಿಹಾರವನ್ನು ನಾಡದೋಣಿ ಮೀನುಗಾರರಿಗೆ ವಿತರಿಸಲು ಸಾಧ್ಯವಾಗದೆ, ಕಳೆದ ಮೂರು ವರ್ಷಗಳಿಂದ ಸಮಸ್ಯೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಮೊಯ್ದಿನ್ ಬಾವ, ತಾಂತ್ರಿಕ ತೊಡಕುಗಳನ್ನು ನಿವಾರಿಸಿ, ಪರಿಹಾರ ಪಾವತಿಗೆ ವ್ಯವಸ್ಥೆ ಮಾಡಲು ಒತ್ತಡ ಹೇರಿದ್ದರು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಈ ಬಗ್ಗೆ ಎಂಎಸ್‌ಇಝಡ್ ಹಾಗೂ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಹಾಯಕ ಆಯುಕ್ತರ ಖಾತೆಯಲ್ಲಿದ್ದ ಒಂದು ಕೋಟಿ ರೂ. ಮೊತ್ತವನ್ನು ಎಂಎಸ್‌ಇಝಡ್ ಸಂಸ್ಥೆಗೆ ವಾಪಸು ನೀಡಿ, ಎಂಎಸ್‌ಇಝಡ್‌ನಿಂದಲೇ ನೇರವಾಗಿ ನಾಡದೋಣಿ ಮೀನುಗಾರರ ಖಾತೆಗೆ ಪರಿಹಾರ ಜಮಾ ಮಾಡಲು ತೀರ್ಮಾನಿಸಲಾಯಿತು.

ಈ ಮೂಲಕ ಸುಮಾರು 1,500ಕ್ಕೂ ನಾಡದೋಣಿ ಮೀನುಗಾರರಿಗೆ ಪರಿಹಾರ ದೊರಕಲಿದೆ.

ಶಾಸಕ ಮೊಯ್ದಿನ್ ಬಾವ ಅವರು ಸಭೆಯಲ್ಲಿ ಮಾತನಾಡಿ, ಆದಷ್ಟು ಬೇಗನೇ ಪರಿಹಾರ ಮೊತ್ತವನ್ನು ನಾಡದೋಣಿ ಮೀನುಗಾರರ ಖಾತೆಗೆ ಜಮಾ ಮಾಡಲು ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಮೀನುಗಾರ ಮುಖಂಡರು, ನಾಡದೋಣಿ ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಶಾಸಕ ಮೊಯ್ದಿನ್ ಬಾವ ಹಾಗೂ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮಂಗಳೂರು ಎಸಿ ಡಾ.ಅಶೋಕ್ , ಎಂಎಸ್‌ಇಝಡ್ ಅಧಿಕಾರಿಗಳು, ಮೀನುಗಾರಿಕೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News