ಕಡಬ: ಗೃಹರಕ್ಷಕದಳ ಘಟಕದಿಂದ ವನಮಹೋತ್ಸವ

Update: 2016-07-17 12:42 GMT

ಮಂಗಳೂರು, ಜು.17: ಗೃಹರಕ್ಷಕ ದಳ ಕಡಬ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಉಪಯೋಗಿಸುವಂತಹ ಅಸ್ಕಾ ಲೈಟ್ ಹಸ್ತಾಂತರ ಕಾರ್ಯಕ್ರಮವು ರವಿವಾರ ಕಡಬ ಠಾಣೆಯಲ್ಲಿ ನಡೆಯಿತು.

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳೀ ಮೋಹನ್ ಅಸ್ಕಾ ಲೈಟ್‌ನ್ನು ಕಡಬ ಘಟಕಕ್ಕೆ ಹಸ್ತಾಂತರಿಸಿ ಮಾತನಾಡಿ, ಪರಿಸರದಲ್ಲಿ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳಾದ ಸಂದರ್ಭದಲ್ಲಿ ಬೆಳಕಿನ ವ್ಯವಸ್ಥೆಗಳಿಲ್ಲದ ಸ್ಥಳಗಳಲ್ಲಿ ಅಸ್ಕಾ ಲೈಟ್‌ಗಳನ್ನು ಬಳಸಬಹುದಾಗಿದೆ. ಪೆಟ್ರೋಲ್ ಮೂಲಕ ಪರಿಸರದ ಸುಮಾರು 400 ಮೀ. ವ್ಯಾಪ್ತಿಗೆ ಬೆಳಕನ್ನು ನೀಡುವ ಸುಮಾರು 2.5 ಲಕ್ಷ ರೂ. ಬೆಲೆಬಾಳುವಂತಹ ಲೈಟ್‌ಗಳನ್ನು ಜಿಲ್ಲೆಯಲ್ಲಿರುವ 14 ಗೃಹರಕ್ಷಕ ಘಟಕಗಳಿಗೂ ಹಸ್ತಾಂತರಿಸಲಾಗುತ್ತಿದೆ ಎಂದರು. ನೆರೆ ಹಾವಳಿ, ಭೂಕುಸಿತ, ನೈಸರ್ಗಿಕ ವಿಕೋಪಗಳಾದ ಸಂದರ್ಭಗಳಲ್ಲಿ ಸಾರ್ವಜನಿಕರು ಗೃಹರಕ್ಷಕ ದಳಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.

ನಂತರ ಕಡಬ ಪೊಲೀಸ್ ಠಾಣೆಯ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿರುವ 20,000 ಗೃಹರಕ್ಷಕ ದಳದ ಸಿಬ್ಬಂದಿ ಪ್ರತಿಯೋರ್ವರೂ ಎರಡು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಪರಿಸರದ ರಕ್ಷಣೆಗೆ ಆದ್ಯತೆ ನೀಡುವ ನೂತನ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ, ಗೃಹರಕ್ಷಕ ದಳದ ಘಟಕಾಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News