ಭೂ ಕುಸಿತ ಸಂಭವಿಸಿದ ಕೊಂಗೂರುಮಠ ಪ್ರದೇಶಕ್ಕೆ ಶಾಸಕ ಲೋಬೊ ಭೇಟಿ
ಮಂಗಳೂರು, ಜು.17; ಕುಲಶೇಖರದ ಕೊಂಗೂರು ಮಠದ ರಸ್ತೆಯಲ್ಲಿ ರೈಲ್ವೆ ಹಳಿ ಕಾಮಗಾರಿ ಸಂದರ್ಭ ನಡೆದ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಇಂದು ಶಾಸಕ ಜೆ.ಆರ್.ಲೋಬೊ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕಾರ್ಯ ಕೈಗೊಳ್ಳಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರವಿವಾರ ಬೆಳಗ್ಗೆ ಭೂಕುಸಿತ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಜೆ .ಆರ್. ಲೋಬೊ ಸ್ಥಳ ಪರಿಶೀಲನೆ ನಡೆಸಿ, ಎರ್ನಾಕುಲಂ ರೈಲ್ವೆ ಮುಖ್ಯ ಇಂಜಿನಿಯರ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಇನ್ನಷ್ಟು ಭೂಕುಸಿತವಾಗುವುದನ್ನು ತಪ್ಪಿಸಲು ಭೂಕುಸಿತವಾದ ಪ್ರದೇಶದಲ್ಲಿ ಕೂಡಲೇ ಮರಳು ಚೀಲವನ್ನು ಹಾಕಬೇಕು. ಅಪಾಯದ ಸ್ಥಿತಿಯಲ್ಲಿರುವ ಮನೆಮಂದಿಯ ಒಪ್ಪಿಗೆಯನ್ನು ಪಡೆದು ಅವರಿಗೆ ಬದಲಿ ವ್ಯವಸ್ಥೆಗಳನ್ನು ಮಾಡಬೇಕು. ಈ ಪ್ರದೇಶದಲ್ಲಿ ಶಾಶ್ವತ ಕಾಂಕ್ರೀಟ್ ಗೋಡೆ ನಿರ್ಮಿಸುವುದಕ್ಕೆ ವ್ಯವಸ್ಥೆ ಮಾಡಬೇಕು, ಸ್ಫೋಟ ಮಾಡುವ ಕಾರ್ಯವನ್ನು ಮಳೆಗಾಲದ ನಂತರ ಮಾಡಬೇಕು ಮತ್ತು ಅದಕ್ಕೆ ನಿಯಾಮಾವಳಿಯನ್ನು ಅನುಸರಿಸಬೇಕು ಎಂದು ಸೂಚಿಸಿದರು.
ಶಾಸಕರ ಭೇಟಿ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.