×
Ad

ಹಾರಾಡಿ: ಶಾಲಾ ಪೋಷಕರಿಂದ ಜುಲೈ 19ರಂದು ಪ್ರತಿಭಟನೆಗೆ ನಿರ್ಣಯ

Update: 2016-07-17 19:01 IST

ಪುತ್ತೂರು, ಜು.17: ಹೆಚ್ಚುವರಿ ಶಿಕ್ಷಕರ ಆಯ್ಕೆ ಮೂಲಕ ಪ್ರಾಥಮಿಕ ಶಾಲೆಯ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಲು ಪುತ್ತೂರು ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ ಪ್ರಯತ್ನ ನಡೆಸುತ್ತಿದ್ದು, ಹಾರಾಡಿ ಪ್ರಾಥಮಿಕ ಶಾಲೆಯಲ್ಲಿ 432 ಮಕ್ಕಳಿದ್ದಾರೆ. ಇಲ್ಲಿಂದ ಏಕಾಏಕಿ 5 ಮಂದಿ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿಗೆ ಅಡ್ಡಿ ಪಡಿಸುವ ಕ್ರಿಯೆಯಾಗಿದೆ. ಇದರ ವಿರುದ್ಧ ಜುಲೈ 19ರಂದು ಶಿಕ್ಷಣ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಹಾರಾಡಿ ಶಾಲಾ ಪೋಷಕರ ತುರ್ತು ಸಭೆಯಲ್ಲಿ ನಿರ್ಣಯಿಸಲಾಯಿತು.

ರವಿವಾರ ನಡೆದ ಹಾರಾಡಿ ಪೋಷಕರ ತುರ್ತು ಸಭೆಯಲ್ಲಿ ಅವೈಜ್ಞಾನಿಕವಾದ ನಿಯಮಗಳನ್ನು ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ನಾಯ್ಕ, ಹಾರಾಡಿ ಶಾಲೆಯ ಅಸ್ತಿತ್ವವನ್ನೇ ಹಾಳು ಮಾಡುವ ಕೆಲಸಕ್ಕೆ ಶಿಕ್ಷಣಾಧಿಕಾರಿಗಳು ಮುಂದಾಗಿದ್ದಾರೆ. ಶಿಕ್ಷಣ ಹಕ್ಕಿನ ನಿಯಮದಂತೆ ಈಗ ಇಲ್ಲಿರುವ ಶಿಕ್ಷಕರ ಸಂಖ್ಯೆ ಸಮರ್ಪಕವಾಗಿದೆ. ಆದರೆ ಇಲ್ಲಿಂದ 5 ಮಂದಿ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ಮಾಡಲು ಹೊರಟಿರುವುದು ಪ್ರಜ್ಞಾವಂತ ಜನತೆ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಯಾವುದೋ ಲಾಬಿಯಿಂದ ಅಧಿಕಾರಿ ವರ್ಗ ಈ ಕೆಲಸಕ್ಕೆ ಇಳಿದಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ಹಾರಾಡಿ ಶಾಲೆಯಲ್ಲಿ ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ದೊರೆಯುತ್ತಿದ್ದು, ಇದಕ್ಕಾಗಿಯೇ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಇಲಾಖೆ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮ ಶಾಲಾ ಮಕ್ಕಳ ಹಿತವನ್ನು ಬಲಿ ತೆಗೆದುಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಪೋಷಕರು ಹಾರಾಡಿ ಶಾಲೆಯಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಬೀದಿಗಿಳಿದು ನಿರಂತರ ಹೋರಾಟ ನಡೆಸಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಎಸ್‌ಡಿಎಂಸಿ ಜಿಲ್ಲಾ ಕಾರ್ಯದರ್ಶಿ ಇಸ್ಮಾಯೀಲ್, ಹಿರಿಯ ವಿದ್ಯಾರ್ಥಿ ಲೋಕೇಶ್ ಗೌಡ ಅಲುಂಬುಡ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಸದಸ್ಯರಾದ ರಮೇಶ್ ಬಿ. ವಂದಿಸಿದರು. ಉಪಾಧ್ಯಕ್ಷೆ ಪ್ರತಿಮಾ ರೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News