×
Ad

ಮುಖ್ಯಮಂತ್ರಿ ಬದಲಾಯಿಸುವ ಸ್ಥಿತಿ ಕರ್ನಾಟಕದಲ್ಲಿಲ್ಲ: ಮೊಯ್ಲಿ

Update: 2016-07-17 20:58 IST

ಉಡುಪಿ, ಜು.17: ಪ್ರಸ್ತುತ ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತಹ ಪರಿಸ್ಥಿತಿ ಬಂದಿಲ್ಲ. ಈ ಬಗ್ಗೆ ಹೇಳಿಕೆ ನೀಡುವ ಪಕ್ಷದ ಹಿರಿಯ ಮುಖಂಡರಿಗೆ ಸಹನೆ ಇರಬೇಕೆ ಹೊರತು ಅಸಹನೆ ಇರಬಾರದು. ಸಹನೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮುಖ್ಯಮಂತ್ರಿ ಕುರಿತು ನೀಡಿದ ಹೇಳಿಕೆ ಬಗ್ಗೆ ಸುದ್ದಿಗಾರರು ಉಡುಪಿಯಲ್ಲಿಂದು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಹಿರಿಯ ಮುಖಂಡರಿಗೆ ಅಧಿಕಾರದ ಆಸೆ ಇರಬಾರದು. ಅವರಿಗೆ ತಾಳ್ಮೆ ಮುಖ್ಯ. ಅಧಿಕಾರಿ ವಹಿಸಿಕೊಂಡವರ ಬಗ್ಗೆ ಸಹನೆ ತೋರಿಸಬೇಕು ಎಂದರು.

ಪಕ್ಷದೊಳಗಿನ ವಿಚಾರವನ್ನು ಬಗೆಹರಿಸುವ ಕುರಿತು ಆತಂರಿಕವಾಗಿ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಅವಕಾಶ ಇದೆ. ಅದನ್ನು ಪಕ್ಷದೊಳಗೆ ಹೇಳಬೇಕೆ ಹೊರತು ಸಾರ್ವಜನಿಕರಿಗೆ ಹೇಳುವುದು ಸರಿಯಲ್ಲ. ಈ ರೀತಿ ಅಧಿಕಾರದ ಆಸೆಯಿಂದ ಹೇಳುವುದು ಸರಿಯಲ್ಲ. ರಾಜ್ಯದಲ್ಲಿನ ಸುಧಾರಣೆಯ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ನಾನು ಜೊತೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.

ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆ ಕೊಡಬೇಕು ಎಂದು ರಾಜಕೀಯವಾಗಿ ಹೇಳಿದ ಕೂಡಲೇ ರಾಜೀನಾಮೆ ಕೊಡಲು ಆಗುವುದಿಲ್ಲ. ಅದಕ್ಕೆ ಆಧಾರ, ದಾಖಲೆಗಳು ಬೇಕು. ಈಗ ಆ ಪ್ರಕರಣದ ಬಗ್ಗೆ ಸಿಒಡಿ, ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅದರಿಂದ ಸತ್ಯಾಂಶ ಹೊರ ಬರುತ್ತದೆ. ಅದರಲ್ಲಿ ಜಾರ್ಜ್ ಕುರಿತು ಪುರಾವೆ ಸಿಕ್ಕಿದರೆ ಖಂಡಿತ ಅವರು ರಾಜೀನಾಮೆ ನೀಡಬೇಕು ಎಂದು ಮೊಯ್ಲಿ ಹೇಳಿದರು.

ಸಾವಿಗೆ ಮೊದಲು ನೀಡಿದ ಹೇಳಿಕೆಯನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಈ ಪ್ರಕರಣದ ಸಿಒಡಿ ಹಾಗೂ ನ್ಯಾಯಾಂಗ ತನಿಖೆ ಶೀಘ್ರವೇ ಮುಗಿಸಿ ವರದಿ ನೀಡಬೇಕು. ಅದಕ್ಕೆ ಮಂತ್ರಿಮಂಡಲ ಸಹಕಾರ ನೀಡಬೇಕು. ಆಗ ಈ ತನಿಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು.
 
ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪು. ಅಂತವರಿಗೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ತಿಳಿಹೇಳಬೇಕಾಗಿದೆ. ಇದು ಎಲ್ಲ ಪಕ್ಷದ ಮುಖಂಡರಲ್ಲಿಯೂ ಇರುತ್ತದೆ. ಆದರೆ ಕಾಂಗ್ರೆಸ್‌ನವರು ಮಾತ್ರ ಈ ರೀತಿ ದಬ್ಬಾಳಿಕೆ ಮಾಡುತ್ತಾರೆ ಎಂದು ಹೇಳುವುದು ಸರಿಯಲ್ಲ. ಕೆಲವು ಮುಖಂಡರು ತಮ್ಮಲ್ಲಿರುವ ದೌರ್ಬಲ್ಯದಿಂದ ಈ ರೀತಿ ಮಾಡುತ್ತಾರೆ. ಇದರಿಂದ ಅವರ ಅಧಿಕಾರದ ವರ್ಚಸ್ಸು ಕುಗ್ಗುತ್ತದೆ ಎಂದು ಅವರು ತಿಳಿಸಿದರು.

ಎತ್ತಿನಹೊಳೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ, ಎತ್ತಿನಹೊಳೆ ಬಗ್ಗೆ ಈಗಾಗಲೇ ಮುಖ್ಯ ಮಂತ್ರಿಗಳು ಹೇಳಿಕೆಕೊಟ್ಟಿದ್ದಾರೆ. ಅದರ ಕೆಲಸ ಜೋರಾಗಿ ನಡೆಯುತ್ತಿದೆ. ನಾನು ಆ ಬಗ್ಗೆ ಏನನ್ನು ಹೇಳಲ್ಲ ಎಂದು ವೀರಪ್ಪ ಮೊಯ್ಲಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News