ಕನ್ನಡ ಸಾಹಿತ್ಯದ ಪ್ರಕಟನೆಯಲ್ಲಿ ಪ್ರಶಂಸನೀಯ ಬೆಳವಣಿಗೆ:ಟಿ.ಎಸ್.ದಕ್ಷಿಣಾಮೂರ್ತಿ

Update: 2016-07-17 16:17 GMT

ಮೂಡುಬಿದಿರೆ, ಜು.17: ವಾರ್ಷಿಕ ಏಳು ಸಾವಿರಕ್ಕೂ ಮಿಕ್ಕಿದ ಕನ್ನಡ ಸಾಹಿತ್ಯ ಪ್ರಕಟನೆಗಳು ನಮ್ಮ ನಾಡಿನಲ್ಲಿ ನಡೆಯುತ್ತವೆ ಎನ್ನುವ ಅಧಿಕೃತ ಮಾಹಿತಿ ಕನ್ನಡ ಸಾಹಿತ್ಯ ವಲಯದಲ್ಲಿ ಮೆಚ್ಚಬೇಕಾದ ಬೆಳವಣಿಗೆ. ಈ ಪ್ರಕಟನೆಗಳಂತೆ ಓದುಗರೂ ಹೆಚ್ಚುತ್ತಿದ್ದಾರೆ ಎನ್ನುವುದೂ ಆಶಾದಾಯಕ ಬೆಳವಣಿಗೆ. ಐಟಿಬಿಟಿ ಕ್ಷೇತ್ರದವರೂ ಸಾಹಿತ್ಯ ರಚನೆಗೆ ಮುಂದಾಗುತ್ತಿರುವುದು ಮತ್ತು ಸಾಹಿತ್ಯದಲ್ಲಿ ಆತ್ಮಕಥನ, ಅನುಭವ ಕಥನಗಳೇ ಹೆಚ್ಚಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಟಿ.ಎಸ್.ದಕ್ಷಿಣಾಮೂರ್ತಿ ಹೇಳಿದರು.

ಅವರು ರವಿವಾರ ಕನ್ನಡ ಸಂಘ ಕಾಂತಾವರ ವತಿಯಿಂದ ಇಲ್ಲಿನ ಕನ್ನಡ ಭವನದಲ್ಲಿ ನಡೆದ ಪುಸ್ತಕೋತ್ಸವ-2016 ಸಮಾರಂಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಹನ್ನೆರಡು ಹೊತ್ತಗೆಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.

ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ವೈಯಕ್ತಿಕ ನಿಲುವುಗಳಿಂದ ಸಂಸ್ಥೆಯ ಒಲವು ದುರ್ಬಲವಾಗುತ್ತಿದೆ ಎಂದ ಅವರು ಲೇಖಕರು, ಓದುಗರು ಮತ್ತು ಪ್ರಕಾಶಕರ ನಡುವೆ ಸಮನ್ವಯ ಸಾಧಿಸುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪುಸ್ತಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವೈಚಾರಿಕ ಸಾಹಿತ್ಯದ ಒಲವು ಹೆಚ್ಚಿರುವ ಕರಾವಳಿ ಭಾಗದಲ್ಲಿ ವಚನ ಸಾಹಿತ್ಯದ ಪ್ರಚಾರ ಆಗಬೇಕಿದೆ. ಜಾನಪದ ಸಾಹಿತ್ಯ, ಯಕ್ಷಗಾನ ಹೀಗೆ ವಿಶಿಷ್ಠ ಸಂಸ್ಕೃತಿಯ ಸಾಹಿತ್ಯ ಕೊಡುಗೆ ಕರಾವಳಿಯವರದ್ದು ಎಂದವರು ಶ್ಲಾಘಿಸಿದರು.

ನಿಟ್ಟೆ ವಿ.ವಿಯ ಉಪಕುಲಪತಿ ಡಾ.ಎನ್.ವಿನಯ ಹೆಗ್ಡೆ, ನಿವೃತ್ತ ಪ್ರಾಚಾರ್ಯ ಪ್ರೊ. ಜಿ. ಆರ್. ರೈ ಮುಖ್ಯ ಅತಿಥಿಗಳಾಗಿದ್ದರು. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸರೋಜಿನಿ ನಾಗಪ್ಪಯ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ವಂದಿಸಿದರು. ಬಾಬು ಶೆಟ್ಟಿ ನಾರಾವಿಯವರಿಂದ ಕಾವ್ಯ ಪ್ರಾರ್ಥನೆ ನಡೆಯಿತು. ಉಪಾಧ್ಯಕ್ಷ ವಿಠಲ ಬೇಲಾಡಿ ಕೃತಿಕಾರರನ್ನು ಪರಿಚಯಿಸಿದರು.

‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಸಾಧಕರು, ಕೃತಿಕಾರರು ಮತ್ತು ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News