ಬಂಟ್ವಾಳ :ಮೇಕೆ ಕದ್ದು ಸಾಗಾಟ - ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಸಂಘಪರಿವಾರದ ಕಾರ್ಯಕರ್ತರು
ಬಂಟ್ವಾಳ, ಜು. 17: ಮೇಯಲು ಬಿಟ್ಟ ಮೇಕೆಯೊಂದನ್ನು ಕಳವುಗೈದು ಆಟೊ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಸಂಘಪರಿವಾರದ ಮೂವರು ಕಾರ್ಯಕರ್ತರನ್ನು ಸಾರ್ವಜನಿಕರು ಹಿಡಿದು ವಿಚಾರಣೆ ನಡೆಸಿದ ಘಟನೆ ತಾಲೂಕಿನ ಮಲ್ಲೂರಿನ ಅಬ್ಬೆಟ್ಟು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಜನಪದವಿನ ಕಲ್ಪನೆ ನಿವಾಸಿಗಳಾದ ಅತೀಶ್, ಮಹೇಶ್ ಮತ್ತು ಇನ್ನೋರ್ವ ಆಡು ಕದ್ದು ಸಾಗಾಟ ಮಾಡುತ್ತಿದ್ದ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದವರೆಂದು ಗುರುತಿಸಲಾಗಿದೆ.
ಅಬ್ಬೆಟ್ಟಿನ ಅಬ್ಬುವಾಕ ಎಂಬವರು ತನ್ನ ಮನೆಯ ಸಮೀಪದ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಆಡನ್ನು ಈ ಮೂವರು ಅರೋಪಿಗಳು ಕಲ್ಪನೆ ರಿಕ್ಷಾ ಪಾರ್ಕ್‌ನ ವ್ಯಕ್ತಿಯೊಬ್ಬರ ಆಟೊ ರಿಕ್ಷಾದಲ್ಲಿ ಕದ್ದು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಆದಲ್ಲಿ ಸಂಶಯಗೊಂಡ ಸಾರ್ವಜನಿಕರು ರಿಕ್ಷಾ ತಡೆದು ನಿಲ್ಲಿಸಿ ವಿಚಾರಿಸಿದಾಗ ಆರೋಪಿಗಳು ಈ ಆಡನ್ನು ಇಲ್ಲಿನ ನಿವಾಸಿ ಗೌತಮ್ ಎಂಬವರು ತಮಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಗೌತಮ್‌ರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ತಾನು ಯಾರಿಗೂ ಆಡು ಮಾರಾಟ ಮಾಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮೂವರು ಆರೋಪಿಗಳು ಹಾಗೂ ರಿಕ್ಷಾ ಚಾಲಕ ಸಾರ್ವಜನಿಕರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಗಳಾದ ಅತೀಶ್ ಹಾಗೂ ಮಹೇಶ್ ಸಂಘಪರಿವಾರದ ಕಾರ್ಯಕರ್ತರಾಗಿದ್ದು ಈ ಇಬ್ಬರ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್‌ಗಳಿವೆ ಎನ್ನಲಾಗಿದೆ.
ಈ ಹಿಂದೆಯೂ ಅಬ್ಬೆಟ್ಟು ಪರಿಸರದಲ್ಲಿ ರಾಮ ಎಂಬವರ ಸಹಿತ ಕೆಲವು ಮನೆಯವರಿಗೆ ಸೇರಿದ ಆಡುಗಳು ಕಾಣೆಯಾದ ಐದಾರು ಪ್ರಕರಣಗಳು ನಡೆದಿದ್ದು, ಅವುಗಳನ್ನೆಲ್ಲಾ ಈ ಆರೋಪಿಗಳೇ ಕದ್ದು ಸಾಗಿಸಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಲ್ಲಿನ ಜನರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.