×
Ad

ತುಂಬೆ ಅಭಿಮಾನಿಗಳ ಬಳಗದಿಂದ ಡಾ. ಅಮೀರ್ ಅಹ್ಮದ್‌ರಿಗೆ ಅಭಿನಂದನೆ

Update: 2016-07-17 23:10 IST

ಬಂಟ್ವಾಳ, ಜು. 17: ಸಮಾಜದಲ್ಲಿರುವ ನಿರ್ಗತಿಕ, ಬಡವ, ಬಲ್ಲಿದರ ಸೇವೆಯನ್ನು ಮಾಡುವಂತೆ ಎಳೆಯ ಪ್ರಾಯದಿಂದಲೇ ನನ್ನ ತಾಯಿ ಮಕ್ಕಳಾದ ನಮಗೆ ನೀಡುತ್ತಿದ್ದ ಪ್ರೇರಣೆಯೇ ತನ್ನನ್ನು ಸಮಾಜಸೇವೆಯಲ್ಲಿ ತೊಡಗಿಸುವಂತೆ ಮಾಡಿತು ಎಂದು ಸಮಾಜ ಸೇವೆಗಾಗಿ ಇತ್ತೀಚೆಗೆ ಇಂಟರ್‌ನ್ಯಾಶನಲ್ ತಮಿಳ್ ಯುನಿವರ್ಸಿಟಿ ಯುಎಸ್‌ಎ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಹೇಳಿದರು.

ಗೌರವ ಡಾಕ್ಟರ್ ಪದವಿ ಪಡೆದ ಹಿನ್ನೆಲೆಯಲ್ಲಿ ತುಂಬೆ ಅಭಿಮಾನಿಗಳ ಬಳಗ ರವಿವಾರ ಸಂಜೆ ತುಂಬೆ ಜಂಕ್ಷನ್‌ನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಸಹಾಯ ಯಾಚಿಸಿಕೊಂಡು ನಿನ್ನ ಬಳಿಗೆ ಬಂದ ಬಡವರು, ನಿರ್ಗತಿಕರನ್ನು ಬರಿಗೈಯಲ್ಲಿ ಕಳುಹಿಸದೆ ಕೈಯಲ್ಲಾಗುವ ಸಹಾಯ ಮಾಡು ಎಂದು ತನ್ನ ತಾಯಿ ಎಳೆಯ ಪ್ರಾಯದಲ್ಲೇ ಮಕ್ಕಳಾದ ನಮಗೆ ಸಲಹೆ ನೀಡುತ್ತಿದ್ದರು. ತಾಯಿಯ ಸಲಹೆ ಹಾಗೂ ಆಶೀರ್ವಾದದಿಂದ ನಾನು ಸಲ್ಲಿಸಿದ ಸಮಾಜ ಸೇವೆಯನ್ನು ಗುರುತಿಸಿ ತಮಿಳ್ ಯುನಿವರ್ಸಿಟಿ ನನಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಈ ಸಂದರ್ಭದಲ್ಲಿ ತಾಯಿ ನಮ್ಮನ್ನು ಅಗಲಿರುವುದು ದುಃಖದ ಸಂಗತಿಯಾಗಿದೆ ಎಂದು ಅವರು ಭಾವುಕರಾಗಿ ನುಡಿದರು.

ನನ್ನ ರಾಜಕೀಯ ಜೀವನದ ಯಶಸ್ವಿಗೆ ಹಾಗೂ ಸಮಾಜ ಸೇವೆಗೆ ಬೆನ್ನೆಲುಬಾಗಿ ನಿಂತಿರುವ ಎಲ್ಲ ಹಿರಿಯರು, ಕಿರಿಯರು, ಕುಟುಂಬಸ್ಥರಿಗೆ ನಾನು ಋಣಿಯಾಗಿದ್ದೇನೆ ಎಂದ ಅವರು, ಗೌರವ ಡಾಕ್ಟರೇಟ್‌ಗಾಗಿ ಶ್ರಮಿಸಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮುಂದಿನ ದಿನಗಳಲ್ಲೂ ಬಡವ ಬಲ್ಲಿದರ ಸೇವೆಯನ್ನು ಮಾಡುವ ಮೂಲಕ ಡಾ. ಕೆ.ಎಸ್.ಅಮೀರ್ ಅಹ್ಮದ್ ರಾಜಕೀಯವಾಗಿ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮುಸ್ತಫಾ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಳಿ ಮುಲ್ಕಿ ಇದರ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ಡಾ. ಕೆ.ಎಸ್.ಅಮೀರ್ ಅಹ್ಮದ್ ಮಾಡಿರುವ ಸಮಾಜ ಸೇವೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಜಯರಾಮ್ ಸಾಮಾನಿ ತುಂಬೆ, ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು. ಮುಹಮ್ಮದ್ ಜಮಾಲ್ ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ವಂದಿಸಿದರು. ಮುಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News