×
Ad

ತೆರೆಮರೆಗೆ ಸರಿಯುತ್ತಿರುವ ನೈಸರ್ಗಿಕ ಚಾಪೆಗಳ ಛಾಪು!

Update: 2016-07-17 23:51 IST

ಕಾಸರಗೋಡು, ಜು.17: ಎರಡು ದಶಕಗಳ ಹಿಂದೆ ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನಜೀವನದತ್ತ ಕಣ್ಣಾಯಿಸಿದರೆ ನೈಸರ್ಗಿಕ ಚಾಪೆಗಳಿಗೆ ನೀಡುತ್ತಿದ್ದ ಪ್ರಾಮುಖ್ಯತೆಯು ಬೆರಗು ಮೂಡಿಸುತ್ತದೆ. ತಾಳೆಮರದ ಗರಿಯಿಂದ, ಮಡಲಿನಿಂದ, ಕೈದಿಲೆ ಎಂದು ಕರೆಯಲಾಗುವ ಗಿಡವೊಂದರಿಂದ ತಯಾರಿಸಲಾಗುತ್ತಿದ್ದ ಚಾಪೆಗಳ ಬಳಕೆ ಇಂದು ಕಡಿಮೆಯಾಗುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆಯೋ? ಎನ್ನುವ ಸಂದೇಹ ಮೂಡುತ್ತಿದೆ.

ಜಿಲ್ಲೆಯ ಬಡಕುಟುಂಬಗಳ ಸಾವಿರಾರು ಮಹಿಳೆಯರಿಗೆ ಚಾಪೆ ತಯಾರಿ ಕಸುಬು ಸಂಪಾದನೆಯ ಮಾರ್ಗವಾಗಿತ್ತು. ಆದರೆ ಇಂದು ನೈಸರ್ಗಿಕ ಚಾಪೆಗಳು ಲಭ್ಯವಿಲ್ಲ. ಒಂದಿಬ್ಬರು ಚಾಪೆ ತಯಾರಿಸುತ್ತಿದ್ದರೂ ಅವು ಸೀಮಿತ ಸಂಖ್ಯೆಯಲ್ಲಿ ಮಾತ್ರ. ಪ್ಲಾಸ್ಟಿಕ್‌ನ ರಂಗುರಂಗಿನ ರೆಡಿಮೇಡ್ ಚಾಪೆಗಳು ಬಂದ ಬಳಿಕ ನೈಸರ್ಗಿಕ ಚಾಪೆಗಳಿಗೆ ಬೆಲೆ ಇಲ್ಲವಾಯಿತು. ಹಿಂದೆ ವಿವಾಹ ಸಮಾರಂಭಗಳು, ಇತರ ದಿನಗಳಲ್ಲಿ ಅನ್ನವನ್ನು ಬಿಸಿ ಆರಲು ಇಂತಹ ಚಾಪೆಗಳಲ್ಲಿ ಹಾಕಲಾಗುತ್ತಿತ್ತು. ಬೇಸಾಯಗಾರರ ಮನೆಗಳಲ್ಲಿ ಈ ಚಾಪೆಗಳು ತಪ್ಪದೆ ಇರುತ್ತಿದ್ದವು.

ಮುಂಡೋವು ಒಲಿಗಳಿಂದ ಅಂದರೆ ಕೈದಿಲೆ ಎಂಬ ಗಿಡದ ಎಲೆಗಳಿಂದ ತಯಾರಿಸಲಾಗುವ ಚಾಪೆಗಳ ಉಪಯೋಗ ಬಹಳಷ್ಟಿರುವುದರಿಂದ ತೋಟ, ಗದ್ದೆಗಳಿರುವ ಶ್ರೀಮಂತರ ಮನೆಗಳಲ್ಲಿ ಇವು ಸದಾ ಇರುತ್ತಿದ್ದವು. ವರ್ಷಗಳ ಕಾಲ ಬಾಳ್ವಿಕೆ ಬರುವ ಈ ಚಾಪೆಗಳು ಪ್ಲಾಸ್ಟಿಕ್ ಚಾಪೆಗಳಂತಲ್ಲ. ಹರಿದು ಹೋದರೂ ಬೇರೆ ಅಗತ್ಯಗಳಿಗೆ ಉಪಯೋಗಿಸಬಹುದು.

 ಭತ್ತ ಬೇಯಿಸಿದ ಮೇಲೆ ಒಣಗಿಸಿಡಲು, ಬೇಸಿಗೆಯಲ್ಲಿ ಹಪ್ಪಳ, ಸಂಡಿಗೆ ಮೊದಲಾದವುಗಳನ್ನು ತಯಾರಿಸಿ ಬಿಸಿಲಿಗೆ ಒಣಗಿಸಿಡಲು ನೈಸರ್ಗಿಕ ಚಾಪೆಗಳನ್ನೇ ಉಪಯೋಗಿಸಲಾ ಗುತ್ತಿತ್ತು. ಆದರೆ ಇಂದಿನ ಪ್ಲಾಸ್ಟಿಕ್ ಚಾಪೆಗಳಲ್ಲಿ ಬಿಸಿ ವಸ್ತುಗಳನ್ನು ಹಾಕಿ ಒಣಗಿಸಲು ಸಾಧ್ಯವಿಲ್ಲ. ನದಿ, ಹೊಳೆ, ತೋಡಿನ ಬದಿಗಳಲ್ಲಿ ಬೆಳೆಯುವ ‘ಕೈದಿಲೆ’ ಎಂದು ಕರೆಯಲಾಗುವ ಗಿಡದ ಉದ್ದನೆಯ ಎಲೆಗಳನ್ನು ಉಪಯೋಗಿಸಿ ಚಾಪೆ ತಯಾರಿಸುತ್ತಾರೆ. ತುಳುವಲ್ಲಿ ಈ ಗಿಡಕ್ಕೆ ‘ಮುಂಡೋವುದ ಒಲಿ’ ಎಂದು ಕರೆಯುತ್ತಾರೆ. ಸುತ್ತ ಮುಳ್ಳು ಇರುವ ಒಲಿ ಗಿಡದ ಎಲೆಗಳನ್ನು ಒಣಗಲು ಇಡಲಾಗುತ್ತದೆ. ಒಣಗಿದ ಒಲಿಯನ್ನು ಬೆಳಗ್ಗಿನಿಂದ ಸಂಜೆಯವರೆಗೆ ನೀರಿನಲ್ಲಿ ಮುಳುಗಿಸಿಟ್ಟು ಬಳಿಕ ಅದರ ಮುಳ್ಳು ತೆಗೆಯಲಾಗುತ್ತದೆ. ನಂತರ ಅದನ್ನು ವೃತ್ತಾಕಾರದಲ್ಲಿ ಸುತ್ತಿಡಲಾಗುತ್ತದೆ. ಮಾರನೆ ದಿನ ಒಲಿಯನ್ನು ಬಿದಿರಿನ ಕೋಲಿನಿಂದ ನಾಲ್ಕು ಭಾಗವಾಗಿ ಸೀಳಲಾಗುತ್ತದೆ. ಆ ಬಳಿಕ ಒಂದೊಂದರಂತೆ ಹೆಣೆದು ಚಾಪೆ ತಯಾರಿಸುತ್ತಾರೆ. ಇದನ್ನು ಯಾವ ಸಮಯದಲ್ಲಾದರೂ ಮಾಡಬಹುದು.

ಸಾರ್ವಕಾಲಿಕ ಕೆಲಸವಾಗಿರುವುದರಿಂದ ಬಡಕುಟುಂಬದ ಮಹಿಳೆಯರಿಗೆ ಚಾಪೆ ತಯಾರಿಯಂತೂ ಸಂಪಾದನೆಯ ಮಾರ್ಗವಾಗಿದೆ. ನಾ್ಕೈದು ದಶಕಗಳ ಹಿಂದೆ 9 ರೂ. ಇದ್ದ ಚಾಪೆಗಳನ್ನು ಆನಂತರದ ದಿನಗಳಲ್ಲಿ 30 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಮೊದಲು ಮನೆ ಮನೆಗಳಿಗೆ ಮಾರಾಟವಾಗುತ್ತಿದ್ದ ಚಾಪೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲೇ ಮಾರುಕಟ್ಟೆ ಲಭಿಸಿತ್ತು. ಚಾಪೆ ತಯಾರಕರು 50 ರೂ. ಬೆಲೆಗೆ ಮಾರತೊಡಗಿದರು. ಅಂಗಡಿಗಳಲ್ಲಿ, ಜಾತ್ರೆಗಳಲ್ಲಿ ಚಾಪೆಗಳು ಮಾರಾಟವಾಗಲಾರಂಭಿಸಿದ್ದವು. ಕ್ರಮೇಣ ಇದರ ಬೆಲೆ ಹೆಚ್ಚಾಗುತ್ತಾ ಹೋಯಿತು. ಇದರೊಂದಿಗೆ ಕೈದಿಲೆ ಗಿಡಗಳು ಮಾಯ ವಾದವು. ಅನುಭವಸ್ಥರು ಇಲ್ಲವಾದರು. ತಿಳಿದವರಿಗೆ ಚಾಪೆ ತಯಾರಿಸಲು ಸಮಯ ಇಲ್ಲವಾಯಿತು. ಪರಿಣಾಮ ಇಂತಹ ಚಾಪೆಗಳು ಲಭ್ಯತೆ ಅಪರೂಪ ಎಂಬಂತಾಯಿತು.

ಹಿಂದಿನ ಕಾಲದಲ್ಲಿ ಚಾಪೆ ತಯಾರಕರು ತಾವೇ ಅದನ್ನು ಮಾರುತ್ತಿದ್ದರು ಅವುಗಳಿಗೆ ನಿಗದಿತ ಬೆಲೆ ಇರಲಿಲ್ಲ ಎಂದು ಗ್ರಾಮೀಣ ಪ್ರದೇಶಗಳ ಹಿರಿಯರು ಹೇಳುತ್ತಾರೆ. ಇಂದು ಇಂತಹ ಚಾಪೆಗಳಿಗೆ 300 ರೂ. ಬೆಲೆ ಇದೆ. ಆದರೆ ಇವು ಸಿಗುವುದು ತೀರಾ ವಿರಳ. ಒಂದು ಚಾಪೆ ತಯಾರಿಸಲು ಒಂದು ದಿನವೂ ಸಾಕಾಗುವುದಿಲ್ಲ. ಕನಿಷ್ಠ ಎರಡು ದಿನಗಳು ಬೇಕಾಗುತ್ತವೆ. ತರಾತುರಿಯಲ್ಲಿ ಹೆಣೆದರೆ ಹುಲ್ಲು ಪರಸ್ಪರ ಜೋಡಣೆಯಾಗದಿದ್ದರೆ ರಂಧ್ರ ಬೀಳುತ್ತದೆ. ಆದ್ದರಿಂದ ಸಮಯಾವಕಾಶ ಮಾಡಿಕೊಂಡು ಹೆಣೆಯಬೇಕಾಗುತ್ತದೆ. ‘ಮುಂಡೋವುದ ಒಲಿ’ಯಂತೆ ಒಣಗಿದ ತೆಂಗಿನ ಗರಿಯ ಚಾಪೆಗಳನ್ನೂ ಹೆಣೆಯುವವರಿದ್ದರು. ಎರಡು ದಿನಗಳು ನೀರಿನಲ್ಲಿ ಮುಳುಗಿಸಿಟ್ಟು ಗರಿಗಳು ಮೆತ್ತಗಾದಾಗ ಅದನ್ನು ಚಾಪೆಯಾಕಾರದಲ್ಲಿ ಒಂದೊಂದಾಗಿ ಮಡಚಿ ಹೆಣೆದು ಚಾಪೆ ತಯಾರಿಸಲಾಗುತ್ತಿತ್ತು. ತಾಳೆಮರದ ಗರಿಗಳನ್ನು ಉಪಯೋಗಿಸಿಯೂ ಈ ಚಾಪೆಗಳನ್ನು ಹೆಣೆಯಲಾಗುತ್ತಿತ್ತು. ಆದರೆ ಮುಂಡೋವುದ ಒಲಿ ಎಂದು ಕರೆಯಲಾಗುವ ಕೈದಿಲೆ ಗಿಡಗಳು ಚಾಪೆ ತಯಾರಿಯಲ್ಲಿ ಹೆಸರು ಪಡೆದಿದ್ದವು.

ಇದರಿಂದ ತಯಾರಿಸಿದ ಚಾಪೆಗಳು ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತಿದ್ದವು. ತೋಡು, ಕೆರೆ, ನದಿ-ಹೊಳೆಗಳ ಬದಿಯಲ್ಲಿ ಧಾರಾಳವಾಗಿ ಬೆಳೆಯುತ್ತಿದ್ದ ಈ ಗಿಡಗಳ ಎಲೆಗಳನ್ನು ತೆಗೆಯಲು ಮಹಿಳೆಯರು ಗುಂಪುಗುಂಪಾಗಿ ಬರುತ್ತಿದ್ದರು. ಆದರೆ ಇಂದು ಇಂತಹ ಗಿಡಗಳು ಕಣ್ಮರೆಯಾಗಿವೆ. ಬೇಸಿಗೆಯಲ್ಲಿ ಗಿಡಗಳನ್ನು ಕಡಿದುದರಿಂದಲೂ, ಒಣಗಿ ಹೋಗಿರುವುದರಿಂದಲೂ ಅವು ಮತ್ತೆ ಚಿಗುರೊಡೆಯದೆ ನಾಶಗೊಂಡಿವೆ. ಹಿಂದುಳಿದ ವರ್ಗದವರು ಹೆಚ್ಚಾಗಿ ತಯಾರಿಸುತ್ತಿದ್ದ ಈ ಚಾಪೆಗಳು ಶ್ರೀಮಂತರ ಮನೆಗೆ ಮಾರಾಟವಾಗುತ್ತಿದ್ದವು. ಆದರೆ ಈ ಚಾಪೆಗಳಿಗೆ ಮಾರುಕಟ್ಟೆ ಲಭಿಸಿದ ಬಳಿಕ ಇವುಗಳ ಲಭ್ಯತೆ ಕುಸಿಯತೊಡಗಿತು.

ಹಿಂದೆ ಎಲ್ಲರೂ ಒಟ್ಟಿಗೆ ಚಾಪೆ ತಯಾರಿಸುತ್ತಿದ್ದೆವು. ಮುಂಡೋವುದ ಒಲಿಗಳು ಅಗತ್ಯಕ್ಕೆ ತಕ್ಕಂತೆ ಲಭ್ಯವಿದ್ದುದರಿಂದ ಚಾಪೆ ತಯಾರಿಸಿ ಮಾರುವುದೇ ವೃತ್ತಿಯಾಗಿತ್ತು. ಆದರೆ ಇಂದು ಗಿಡಗಳಿಲ್ಲ. ಅನುಭವಸ್ಥ ತಯಾರಕರೂ ಇಲ್ಲ. ಗಿಡಗಳು ಸಿಕ್ಕಿದರೆ ಒಬ್ಬಳೇ ಚಾಪೆ ತಯಾರಿಸುತ್ತೇನೆ. ಆದರೆ ಮಾರುವಷ್ಟು ಸಿಗುವುದಿಲ್ಲ ಎಂದು ಕಿದೂರು ಕುಂಟಗೇರಡ್ಕದ ಮಾಗಿಲು ಹೇಳುತ್ತಾರೆ.

Writer - ಸ್ಟೀಫನ್ ಕಯ್ಯರ್

contributor

Editor - ಸ್ಟೀಫನ್ ಕಯ್ಯರ್

contributor

Similar News