ತುಳುವಿನಲ್ಲಿ ಎಷ್ಟು ಅಕ್ಷರಗಳಿವೆ?: ಸಂವಾದ
ಮಂಗಳೂರು, ಜು.17: ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ನಡೆಸಿದ ‘ತುಳುಟು ಏತ್ ಬರೆಪಿಲುಲ್ಲ’ (ತುಳುವಿನಲ್ಲಿ ಎಷ್ಟು ಅಕ್ಷರಗಳಿವೆ) ಎಂಬ ಸಂವಾದ ಕಾರ್ಯಕ್ರಮವು ಮಂಗಳೂರಿನ ಡಾನ್‌ಬಾಸ್ಕೋ ಮಿನಿಹಾಲ್‌ನಲ್ಲಿ ನಡೆಯಿತು.
ತು.ಧ.ಸಂ.ಕೇಂ. ಸಂಚಾಲಕ ಪೇರೂರು ಜಾರು ಮಾತ ನಾಡಿ, ಪ್ರತಿಯೊಂದು ಭಾಷೆಗೂ ಅದರದೇ ಆದ ಸ್ವರ ವಿಜ್ಞಾನ ಫೊನೆಟಿಕ್ ಇರುತ್ತದೆ. ಒಂದು ಭಾಷೆಯನ್ನು ಇನ್ನೊಂದು ಭಾಷೆಯ ಲಿಪಿಯಲ್ಲಿ ಬರೆದಾಗ ಅದನ್ನು ಓದಲು ಕಷ್ಟವಾಗುವುದು ಈ ಕಾರಣದಿಂದಲೇ. ತುಳು ಸ್ವರಗಳನ್ನು ಬಿಡಿಸಿದಾಗ ಅದರಲ್ಲಿ ಮಹಾಪ್ರಾಣ ಅಕ್ಷರಗಳು ಇಲ್ಲದಿರುವುದು ಕಂಡುಬರುತ್ತದೆ. ಅದೇ ವೇಳೆ ಅ, ಆ, ಆ್ಯ ಹಾಗೂ ಎ, ಏ, ಏ್ಯ ಎಂಬ ಮೂರು ಸ್ವರ ಭೇದಗಳಿರುವುದೂ ಇವೆರಡರಲ್ಲಿ ಕಂಡುಬರುತ್ತವೆ. ‘ಕಯ್’ ಎನ್ನುವುದನ್ನು ತುಳುವಿನಲ್ಲಿ ಹೀಗೆ ಬರೆದು ಓದುವುದೇ ಸರಿ ಎಂದರು.
ತುಳು ಲಿಪಿ ಎಂದು ಕರೆದಿರುವ ಲಿಪಿಯಲ್ಲಿ ಬ್ರಾಹ್ಮಣರ ತುಳುವಿನ ಪುಸ್ತಕಗಳು ದೊರೆತಿವೆ. ಅದನ್ನು ತುಳು ಲಿಪಿ ಎನ್ನಲು ಮೇಲಿನ ಅಂಶಗಳು ಪೂರಕವಾಗಿಲ್ಲ. ಆದರೆ ‘ತಿಗಳಾರಿ ಲಿಪಿ’ ಎನ್ನಲು ಅಡ್ಡಿಯಿಲ್ಲ. ತುಳುಮೂಲ ಜನರ ಯಾವುದೇ ಸಾಹಿತ್ಯ ಆ ಲಿಪಿಯಲ್ಲಿ ದೊರೆತಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ. ತುಳುವಿನಲ್ಲಿ ‘ಶ,ಷ’ ಅಕ್ಷರಗಳೂ ಕಂಡುಬರುವುದಿಲ್ಲ. ಜೈನರಿಂದಾಗಿ ‘ಹ’ ತುಳುವಿನಲ್ಲಿ ಸೇರಿಕೊಂಡಿವೆ. ಅದೇ ರೀತಿ ‘ವ’ ಅಕ್ಷರ ಕೂಡ ಅನಂತರದ ಸೇರ್ಪಡೆಯೇ ಆಗಿದೆ. ‘ಳ’ ಎಂಬುದು ದ್ರಾವಿಡ ಭಾಷಾ ವಿಶೇಷವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರವೀಣ್ ಶೆಟ್ಟಿ, ನಟೇಶ್ ಉಳ್ಳಾಲ್, ಕೇತನ್ ದೇವಾಡಿಗ, ದಿನೇಶ್ ಮುಲ್ಕಿ, ನವೀನ್‌ಕುಮಾರ್, ಮಹೇಶ್ ಮೊದಲಾದವರು ತಮ್ಮ ವಾದಗಳನ್ನು ಮಂಡಿಸಿದರು.