ಲೂಸಿಯಾನಾದಲ್ಲಿ ಶೂಟೌಟ್:ಮೂವರು ಪೊಲೀಸ್ ಅಧಿಕಾರಿಗಳ ಹತ್ಯೆ,ಹಲವರಿಗೆ ಗಾಯ
ಲೂಸಿಯಾನಾ(ಅಮೆರಿಕಾ),ಜು.17: ಪೊಲೀಸ್ ಅಧಿಕಾರಿಯೋರ್ವನಿಂದ ಕರಿಯ ಯುವಕನ ಹತ್ಯೆಯ ಬಳಿಕ ಇತ್ತೀಚಿನ ದಿನಗಳಲ್ಲಿ ಉದ್ವಿಗ್ನತೆಯ ಸುಳಿಗೆ ಸಿಲುಕಿರುವ ಲೂಸಿಯಾನಾದ ಬ್ಯಾಟನ್ ರೋಜ್‌ನಲ್ಲಿ ರವಿವಾರ ನಡೆದ ಶೂಟೌಟ್‌ನಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಬಲಿಯಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.
ಬ್ಯಾಟನ್ ರೋಜ್‌ನ ಹ್ಯಾಮಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಓರ್ವ ಶಂಕಿತ ದಾಳಿಕೋರನನ್ನು ಕೊಲ್ಲಲಾಗಿದೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು,ಅವರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಈಸ್ಟ್ ಬ್ಯಾಟನ್ ರೋಜ್ ಶೆರೀಫ್‌ರ ಕಚೇರಿಯು ತಿಳಿಸಿದೆ.
ವ್ಯಕ್ತಿಯೋರ್ವ ಅಸಾಲ್ಟ್ ರೈಫಲ್‌ನೊಂದಿಗೆ ನಡೆದುಕೊಂಡು ಹೋಗುತ್ತಿದ್ದನ್ನು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಶೂಟೌಟ್ ನಡೆದಿದ್ದು, ಏಳು ಅಧಿಕಾರಿಗಳು ಗುಂಡೇಟಿನಿಂದ ಗಾಯಗೊಂಡಿದ್ದರು. ಈ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಆಲ್ಟನ್ ಯಂಗ್ ಎಂಬ ಕರಿಯ ಯುವಕನನ್ನು ಪೊಲೀಸ್ ಅಧಿಕಾರಿಯೋರ್ವ ಹತ್ಯೆಗೈದನಂತರ ಬ್ಯಾಟನ್ ರೋಜ್‌ನಲ್ಲಿ ಆಗಾಗ್ಗೆ ಪೊಲೀಸರು ಮತ್ತು ಸಮುದಾಯದ ಸದಸ್ಯರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಕೆಲವೇ ದಿನಗಳ ಹಿಂದೆ ಡಲ್ಲಾಸ್‌ನಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿತ್ತು.