ಸಿಪಿಎಂ ಕಾರ್ಯಕರ್ತನ ಹತ್ಯೆ ಪ್ರಕರಣ: ನಾಲ್ವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ
ಕಾಸರಗೋಡು, ಜು.17: ಪಯ್ಯನ್ನೂರಿನಲ್ಲಿ ಸಿಪಿಎಂ ಕಾರ್ಯಕರ್ತ ಸಿ.ವಿ.ಧನರಾಜ್‌ರನ್ನು ಕೊಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರನ್ನು ಪಯ್ಯನ್ನೂರು ಸರ್ಕಲ್ ಇನ್‌ಸ್ಪೆಪೆಕ್ಟರ್ ವಿ. ರಮೇಶ್ ನೇತೃತ್ವದ ಪೊಲೀಸರ ತಂಡ ರವಿವಾರ ಸಂಜೆ ಬಂಧಿಸಿದೆ.
ಕಕ್ಕಾಯಂಪಾರದ ವೈಶಾಕ್(21), ಸುಕೇಶ್(24), ಪ್ರಜೀತ್ ಲಾಲ್(21) ಹಾಗೂ ಅನೂಪ್(21) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಜು.11ರಂದು ರಾತ್ರಿ ಪಯ್ಯನ್ನೂರು ಕುನ್ನೂರಾವಿಲ್ನ ಸಿಪಿಎಂ ಕಾರ್ಯ ಕರ್ತ ಧನರಾಜ್‌ರನ್ನು ಮನೆಗೆ ನುಗ್ಗಿದ ತಂಡವು ಮಾರಕಾಸ್ತ್ರಗಳಿಂದ ಬರ್ಬರ ವಾಗಿ ಕೊಚ್ಚಿ ಹತ್ಯೆಗೈದಿತ್ತು. ಧನರಾಜ್‌ರ ಹತ್ಯೆ ನಡೆದು ಗಂಟೆಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತ ಸಿ.ಕೆ.ರಾಮಚಂದ್ರನ್ ಎಂಬವರನ್ನು ಮನೆಗೆ ನುಗ್ಗಿದ ತಂಡವೊಂದು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ. ಧನರಾಜ್‌ರ ಕೊಲೆಗೆ ಈ ಹಿಂದೆಯೂ ಯತ್ನಿಸಲಾಗಿತ್ತು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ರಾಜಕೀಯ ದ್ವೇಷ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಇತರ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತರನ್ನು ಜು.18ರಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.