ದಾಖಲೆಗಳಿಲ್ಲದ ನಗ-ನಗದು ಸಾಗಾಟ: ಇಬ್ಬರ ಸೆರೆ
ಕುಂದಾಪುರ, ಜು.19: ಯಾವುದೇ ದಾಖಲೆಗಳಿಲ್ಲದೆ ನಗದು ಹಣ ಹಾಗೂ ಚಿನ್ನದ ಸರಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಶನಿವಾರ ಸಂಜೆ ಕುಂದಾಪುರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ದಿಲೀಪ್ ವಿಲಾಸ್ ಜಾಧವ್ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳಾಗಿದ್ದಾರೆ. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸುತ್ತಿದ್ದ ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರಲ್ಲಿ ಹಣ ಹಾಗೂ ಚಿನ್ನದ ಸರಗಳು ಇರುವುದು ಕಂಡುಬಂತೆನ್ನಲಾಗಿದೆ. ದಿಲೀಪ್ ವಿಲಾಸ್ ಜಾಧವ್‌ನ ಕೈಯಲ್ಲಿದ್ದ ಬ್ಯಾಗ್‌ನಲ್ಲಿ ಒಟ್ಟು 6 ಲಕ್ಷ ರೂ. ನಗದು ಹಾಗೂ ಅಭಿಷೇಕ್ ಪ್ಯಾಂಟ್ ಕಿಸೆಯಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ ಒಟ್ಟು 406.67 ಗ್ರಾಂ ತೂಕದ 64 ಚಿನ್ನದ ಸರಗಳು ಪತ್ತೆಯಾಗಿವೆೆ. ಇವರು ಈ ಚಿನ್ನದ ಸರಗಳನ್ನು ಮೈಸೂರಿನಲ್ಲಿ ತಯಾರಿಸಿ ತಂದು ಇಲ್ಲಿನ ಜ್ಯುವೆಲ್ಲರಿಗಳಿಗೆ ಮಾರಾಟ ಮಾಡುತ್ತಿದ್ದರು. ಇವುಗಳಿಗೆ ಯಾವುದೇ ದಾಖಲೆ ಪತ್ರಗಳು ಇಲ್ಲದ ಕಾರಣ ಪಲೀಸರು ಅವರಿಬ್ಬರನ್ನು ಬಂಧಿಸಿ ನಗ-ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.